ಪೋಷಣೆಯೊಂದಿಗೆ ಮಾತೃ ವಂದನ" ಅಭಿಯಾನ: ಅರ್ಹ ಫಲಾನುಭವಿಗಳ ಶೇ.100ರಷ್ಟು ನೋಂದಣಿಗೆ ಕ್ರಮ - ಉಪನಿರ್ದೇಶಕಿ ಸುಮಂಗಲ ಹಿರೇಮನಿ
admincoorgdaily

ಮಡಿಕೇರಿ: ಅರ್ಹ ಗರ್ಭಿಣಿಯರು ಮತ್ತು ಬಾಣಂತಿಯರನ್ನು ಗುರುತಿಸಿ ಶೇ.100ರಷ್ಟು ಫಲಾನುಭವಿಗಳ ನೋಂದಣಿ ಖಚಿತಪಡಿಸಲು "ಪೋಷಣೆಯೊಂದಿಗೆ ಮಾತೃ ವಂದನ" ವಿಶೇಷ ನೋಂದಣಿ ಮತ್ತು ನಾಗರಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುಮಂಗಲ ಜಿ. ಹಿರೇಮನಿ ತಿಳಿಸಿದರು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅರ್ಹ ಫಲಾನುಭವಿ ಯೋಜನೆಯಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬರೂ ಪ್ರತಿದಿನ ಪ್ರೋಟೀನ್ ಯುಕ್ತ, ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಕರೆ ನೀಡಿದರು.
ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಅವರು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಅರ್ಹತೆ, ಪ್ರಯೋಜನ, ಕಂತು ಮತ್ತು ಅರ್ಜಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. ಬೇಟಿ ಬಚಾವೋ-ಬೇಟಿ ಪಡಾವೋ, ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ ಯೋಜನೆಗಳ ಬಗ್ಗೆಯೂ ವಿವರಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ಕಾಮನಬಿಲ್ಲಿನ ಬಣ್ಣಗಳಂತೆ ಆಹಾರದಲ್ಲಿಯೂ ವಿವಿಧ ಬಣ್ಣಗಳ ಪೌಷ್ಟಿಕ ಆಹಾರ ಸೇರಿಸಬೇಕು. ತಾಜಾ ಮತ್ತು ಬಿಸಿ ಆಹಾರ, ಪ್ರೋಟೀನ್ ಯುಕ್ತ ಆಹಾರ ಕಡ್ಡಾಯ ಎಂದು ಹೇಳಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಪೋಷಣ್ ಮಾಸಾಚರಣೆ ಅಂಗವಾಗಿ ಮುಂದಿನ ತಿಂಗಳು 8ರವರೆಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಆಹಾರದ ರುಚಿ ಪರೀಕ್ಷೆ, ದಿನವಾರು ಮೆನು ಪ್ರದರ್ಶನ, 0-3 ವರ್ಷದ ಮಕ್ಕಳ 34 ಅಭಿವೃದ್ಧಿ ಮೈಲುಗಲ್ಲುಗಳ ವೇಳಾಪಟ್ಟಿ ಪ್ರದರ್ಶನ ಕಡ್ಡಾಯ. ಮಕ್ಕಳಲ್ಲಿ ಬೆಳವಣಿಗೆ ವಿಳಂಬ ಕಂಡುಬಂದಲ್ಲಿ ಬಾಲ್ಯದಲ್ಲಿಯೇ ಗುರುತಿಸಿ ರೆಫರ್ ಮಾಡಲು ಸಹಕಾರಿಯಾಗಲಿದೆ. ಪೌಷ್ಟಿಕ ಕೈತೋಟ, ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್ ನಿರ್ಮಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕಿ ನವ್ಯ, ಪೋಷಣ್ ಅಭಿಯಾನದ ಜಿಲ್ಲಾ ಸಂಯೋಜಕಿ ಕಾವ್ಯ, ಡಾ. ನಿಶ್ವಿಕ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ದಿವ್ಯ, ಆಶಾ ಕಾರ್ಯಕರ್ತೆ ದೇವಿ, ಫಲಾನುಭವಿಗಳು, ಪೋಷಕರು ಹಾಗೂ ಕಸಬಾ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಮೀರಾ ಸ್ವಾಗತಿಸಿ ನಿರೂಪಿಸಿದರು.