ವಿರಾಜಪೇಟೆ ಪುರಸಭೆ ಕಚೇರಿಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಅಭಿಯಾನ
admincoorgdaily

ವಿರಾಜಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನಾಚರಣೆಯನ್ನು ವಿರಾಜಪೇಟೆ ಪುರಸಭೆ ಕಚೇರಿಯಲ್ಲಿ ಅತ್ಯಂತ ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಹಾನ್ ಚೇತನರ ಆದರ್ಶಗಳನ್ನು ಸ್ಮರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿಗಳಾದ ಪಟ್ಟಚೆರವಂಡ ಕೆ. ನಾಚಪ್ಪ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ನಂತರ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಾಧಿಕಾರಿಗಳು, ಗಾಂಧೀಜಿಯವರ ಬದುಕು ಮತ್ತು ಹೋರಾಟದ ಹಿನ್ನೆಲೆಯನ್ನು ಸ್ಮರಿಸಿದರು. "ಸತ್ಯ ಮತ್ತು ಅಹಿಂಸೆ ಕೇವಲ ಪದಗಳಲ್ಲ, ಅವು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶ್ರೇಷ್ಠ ತತ್ವಗಳು. ಗಾಂಧೀಜಿಯವರು ಕಂಡ 'ರಾಮರಾಜ್ಯ' ಅಂದರೆ ಎಲ್ಲರಿಗೂ ಸಮಾನತೆ, ನೆಮ್ಮದಿ ಮತ್ತು ನ್ಯಾಯ ಸಿಗುವ ಸಮಾಜದ ನಿರ್ಮಾಣವಾಗಿದೆ. ಇಂದಿನ ಯುವ ಪೀಳಿಗೆ ಗಾಂಧೀಜಿಯವರ ಸರಳತೆ, ಸ್ವಾಭಿಮಾನ ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ" ಎಂದು ನುಡಿದರು.
ಸ್ವಚ್ಛತೆಯೇ ಸೇವೆ ಹಾಗೂ ಪೌರಕಾರ್ಮಿಕರ ಶ್ರಮ:
ಗಾಂಧೀಜಿಯವರ ಕನಸಿನ 'ಸ್ವಚ್ಛ ಭಾರತ' ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಕರೆ ನೀಡಿದ ಅವರು,"ಸ್ವಚ್ಛತೆಯು ಕೇವಲ ಸರಕಾರದ ಜವಾಬ್ದಾರಿಯಲ್ಲ, ಅದೊಂದು ಸಾಮಾಜಿಕ ಸ್ವಾಸ್ಥ÷್ಯದ ಸಂಕೇತ. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ರೋಗಮುಕ್ತ ಸಮಾಜವನ್ನು ಸೃಷ್ಟಿಸಬಹುದು" ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ಪುರಸಭೆ ವತಿಯಿಂದ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧೀಜಿಯವರ 'ಸ್ವಚ್ಛತೆ ಸೇವಾ' ಸಂದೇಶವನ್ನು ಅಚ್ಚುಕಟ್ಟಾಗಿ ಜಾರಿಗೆ ತಂದರು.
ಗಣ್ಯರು ಹಾಗೂ ಸಿಬ್ಬಂದಿ ಉಪಸ್ಥಿತಿ:
ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕಿ ಕೋಮಲ, ಪರಿಸರ ಅಭಿಯಂತರರಾದ ರೀತು ಸಿಂಗ್, ಪುರಸಭೆಯ ಸಿಬ್ಬಂದಿಗಳಾದ ರಜನಿ ವೇಲುಮುರುಗನ್, ಇರ್ಫಾನ್, ಐವಾನ್, ಮುರಳಿ, ಸಮರ್ಪಕ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು ಸೇರಿದಂತೆ ಪುರಸಭೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.