ಕೊಡವ ಸಮಾಜದ ಅಭಿವೃದ್ಧಿಗೆ ಸದಸ್ಯರು ಕೈಜೋಡಿಸಿ: ಅಜ್ಜಿಕುಟ್ಟೀರ ಸಿ. ಪೂಣಚ್ಚ
admincoorgdaily

ಪೊನ್ನಂಪೇಟೆ: ಕೊಡವ ಸಮಾಜ ಗೋಣಿಕೊಪ್ಪ (ರಿ.) (ಕೊಡವ ಕಲ್ಚರಲ್ ಅಸೋಸಿಯೇಷನ್) ಸಂಸ್ಥೆಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ನ.21ರಂದು ಕೈಕೇರಿಯಲ್ಲಿರುವ ಸಮಾಜದ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಅಜ್ಜಿಕುಟ್ಟೀರ ಸಿ. ಪೂಣಚ್ಚ ಮಾತನಾಡಿ, ಗೋಣಿಕೊಪ್ಪದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕೊಡವ ಸಮಾಜವು ಕೊಡಗಿನಲ್ಲಿಯೇ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಬೃಹತ್ ಸಮಾಜವಾಗಿ ರೂಪುಗೊಳ್ಳಲಿದೆ. ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಾಜದ ಗೌರವ ಕಾರ್ಯದರ್ಶಿ ಚೊಟ್ಟೆಯಂಡಮಾಡ ಮಾದಪ್ಪ ಮಾತನಾಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಶಾಸಕರ ನಿಧಿಯಿಂದ ರೂ.25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಈಗಾಗಲೇ ರೂ.12.50 ಲಕ್ಷ ಬಿಡುಗಡೆಯಾಗಿದೆ. ಉಳಿದ ಹಣ ಶೀಘ್ರದಲ್ಲೇ ದೊರೆಯುವ ನಿರೀಕ್ಷೆಯಿದೆ. ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಸದರ ನಿಧಿಯಿಂದ ರೂ.20 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ತಮ್ಮ ಅನುದಾನದಿಂದ ರೂ.10 ಲಕ್ಷ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಹಲವು ದಾನಿಗಳು ಸಹ ಧನಸಹಾಯ ನೀಡಲು ಮುಂದೆ ಬಂದಿದ್ದು, ಮುಂದಿನ ನಾಲ್ಕು ತಿಂಗಳೊಳಗೆ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಚೊಟ್ಟೇಕ್ಮಾಡ ರಾಜೀವ್ ಬೋಪಯ್ಯ ಮಾತನಾಡಿ, ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣವಾಗಿರುವ ಗೋಣಿಕೊಪ್ಪಕ್ಕೆ ಕೊಡವ ಸಮಾಜವು ಕಿರೀಟಪ್ರಾಯವಾಗಲಿದೆ. ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಕೊಡವರಿಗೆ ಈ ಸಮಾಜದಿಂದ ಅನುಕೂಲವಾಗಲಿದೆ. ಮನೆಯಪಂಡ ಅಯ್ಯಪ್ಪ ಅವರಂತಹ ಹಿರಿಯ ದಾನಿಗಳ ಸಹಕಾರದಿಂದ ಸಮಾಜ ಇಂದು ಈ ಹಂತಕ್ಕೆ ತಲುಪಿದ್ದು, ಅವರ ಕೊಡುಗೆಯನ್ನು ಸದಾ ಸ್ಮರಿಸಬೇಕು. ಇತರೆ ಭಾಗಗಳಲ್ಲಿರುವ ಕೊಡವ ದಾನಿಗಳೂ ಕಟ್ಟಡ ಕಾಮಗಾರಿಗೆ ಧನಸಹಾಯ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಹಣ ಕ್ರೋಢೀಕರಿಸುವ ಉದ್ದೇಶದಿಂದ ಒಂದು ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ ನೀಡುವ ಸದಸ್ಯರ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಸಮಾಜದ ಸಭಾಂಗಣವನ್ನು ಉಚಿತವಾಗಿ ಒದಗಿಸುವ ಯೋಜನೆ ರೂಪಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಮಾಜದ ಸದಸ್ಯರು ವಿವಿಧ ಸಲಹೆ-ಸೂಚನೆಗಳನ್ನು ನೀಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಂಟಿ ಖಜಾಂಚಿ ಸಣ್ಣುವಂಡ ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ಬಲ್ಲಣಮಾಡ ರೀಟಾ ದೇಚಮ್ಮ ಕಳೆದ ಮಹಾಸಭೆಯ ವರದಿಯನ್ನು ಮಂಡಿಸಿದರು. ಚೆಪ್ಪುಡೀರ ಪೃಥ್ವಿ ಪೂಣಚ್ಚ ವಂದಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಕೊಕ್ಕಂಡ ಕುಶ ಬಿದ್ದಪ್ಪ, ನಿರ್ದೇಶಕರಾದ ಕಟ್ಟೇರ ಎನ್. ಅಚ್ಚಪ್ಪ, ಜಮ್ಮಡ ಮೋಹನ್, ಕುಪ್ಪಂಡ ಗಿರಿ ಪೂವಣ್ಣ, ಕೊಲ್ಲಿರ ಧರ್ಮಜ, ಮಲ್ಲಮಾಡ ಪ್ರಭು ಪೂಣಚ್ಚ, ಜಮ್ಮಡ ಗಣೇಶ್ ಅಯ್ಯಣ್ಣ, ಕಡೆಮಾಡ ಮುತ್ತಪ್ಪ, ಕೊಣಿಯಂಡ ಬೋಜಮ್ಮ ಉತ್ತಪ್ಪ, ಖಾಯಂ ಗೌರವ ಆಹ್ವಾನಿತರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಸೇರಿದಂತೆ ಸಮಾಜದ ಸದಸ್ಯರು ಉಪಸ್ಥಿತರಿದ್ದರು.