ಹಾಲಿನ ದರ ಏರಿಕೆ ಸ್ವಾಗತಾರ್ಹ: ನಾಪಂಡ ಮುತ್ತಪ್ಪ ಬೆಂಬಲ
admincoorgdaily

ಕುಶಾಲನಗರ: ಕರ್ನಾಟಕ ಸರ್ಕಾರ ಹಾಲಿನ ದರ ಪ್ರತಿ ಲೀಟರ್ಗೆ 8 ರೂ. ಹೆಚ್ಚಳ ಮಾಡಿರುವುದು ಮತ್ತು ಅದರಲ್ಲಿ 7 ರೂ.ಯನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡುತ್ತಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದು ಹಾಲು ಉತ್ಪಾದಕ ನಾಪಂಡ ಮುತ್ತಪ್ಪ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕ ರೈತರಿಗೆ ಬೆಲೆ ಹೆಚ್ಚಳವಾಗಿರಲಿಲ್ಲ. ಕಳೆದ 5 ವರ್ಷಗಳಲ್ಲಿ ಹಾಲು ಉತ್ಪಾದನಾ ವೆಚ್ಚ ಭಾರಿ ಏರಿಕೆಯಾಗಿದ್ದು, ರೈತರು ಸಂಕಷ್ಟದಲ್ಲಿದ್ದರು. ನಷ್ಟ ತಾಳಲಾರದೆ ಅನೇಕರು ಹೈನುಗಾರಿಕೆಯಿಂದ ಹಿಂದೆ ಸರಿದ ಪರಿಣಾಮ ರಾಜ್ಯದಲ್ಲಿ ಜಾನುವಾರುಗಳ ಸಂಖ್ಯೆ ಇಳಿಮುಖವಾಗಿದೆ. ಈ ಬೆಲೆ ಹೆಚ್ಚಳದಿಂದ ರೈತರು ಮತ್ತೆ ಹೈನುಗಾರಿಕೆಯತ್ತ ಮುಖ ಮಾಡಲಿದ್ದಾರೆ ಎಂದಿದ್ದಾರೆ.
"5 ವರ್ಷಗಳ ಹಿಂದೆ ಒಂದು ಟನ್ ಹಸಿ ಜೋಳದ ಮೇವು 1800 ರೂ. ಇತ್ತು, ಈಗ 5000 ರೂ. ದಾಟಿದೆ. ಫೀಡ್ಸ್, ಔಷಧಿ, ಚಿಕಿತ್ಸಾ ವೆಚ್ಚ, ಸಪ್ಲಿಮೆಂಟರಿ ಆಹಾರಗಳ ಬೆಲೆ 4 ರಿಂದ 5 ಪಟ್ಟು ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿತ್ತು. ಇದನ್ನು ರಾಜಕೀಯಕ್ಕಾಗಿ ವಿರೋಧಿಸದೆ ಎಲ್ಲ ಪಕ್ಷಗಳು ರೈತರ ಹಿತದೃಷ್ಟಿಯಿಂದ ಬೆಂಬಲಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.