ಸರ್ಫೇಸಿ ಕಾಯ್ದೆ ದುರ್ಬಳಕೆ: ಕೆನರಾ ಬ್ಯಾಂಕ್ ವಿರುದ್ಧ ಕೊಡಗಿನಾದ್ಯಂತ ಹೋರಾಟ, ರೈತ ಸಂಘ ಎಚ್ಚರಿಕೆ
admincoorgdaily

ಪೊನ್ನಂಪೇಟೆ, ಅ.9: ಸರ್ಫೇಸಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ರೈತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೆನರಾ ಬ್ಯಾಂಕ್‌ನ ಕ್ರಮಗಳ ವಿರುದ್ಧ ಕೊಡಗಿನಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಗೋಣಿಕೊಪ್ಪದ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ರೈತರ ಜಮೀನುಗಳನ್ನು ಹರಾಜು ಮಾಡುವ ಪ್ರಕ್ರಿಯೆಯಲ್ಲಿ ಕೆನರಾ ಬ್ಯಾಂಕ್‌ನ ಪಾತ್ರ ಹೆಚ್ಚಿದೆ ಎಂದು ಆರೋಪಿಸಿದರು.
ಸಾಲ ಮರುಪಾವತಿಗೆ ರೈತರು ವಿರೋಧಿಗಳಲ್ಲ. ಬ್ಯಾಂಕ್‌ನಿಂದ ಸಾಲ ಪಡೆದ ಬಳಿಕ ಅದನ್ನು ಮರುಪಾವತಿಸುವುದು ರೈತರ ಜವಾಬ್ದಾರಿಯಾಗಿದೆ. ರೈತ ಸಂಘವೂ ಸಾಲ ಮರುಪಾವತಿ ಮಾಡಬಾರದು ಎಂದು ಹೇಳುವುದಿಲ್ಲ. ಆದರೆ ಕೃಷಿ ನಷ್ಟ, ಹವಾಮಾನ ವೈಫಲ್ಯ ಮತ್ತು ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಾಲ ತೀರಿಸಲು ಸೂಕ್ತ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚೆಗೆ ಬಾಳಲೆಯ ರೈತ ಕಾಂಡೇರ ಸುರೇಶ್ ಎಂಬುವರ ಆಸ್ತಿಯನ್ನು ಸಾಲ ಮರುಪಾವತಿ ಮಾಡಿಲ್ಲ ಎಂಬ ನೆಪವೊಡ್ಡಿ ಕೆನರಾ ಬ್ಯಾಂಕ್ ಸರ್ಫೇಸಿ ಕಾಯ್ದೆ ಮುಖಾಂತರ ಮುಟ್ಟುಗೋಲು ಹಾಕಿಕೊಂಡಿದ್ದನ್ನು ಇದೇ ಸಂದರ್ಭದಲ್ಲಿ ಖಂಡಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ 20ರಿಂದ 30 ವರ್ಷಗಳಿಂದ ವನ್ಯಜೀವಿಗಳ ಹಾವಳಿಯಿಂದ ಕಾಫಿ ತೋಟಗಳು, ಅಡಿಕೆ ಮರಗಳು ಹಾಗೂ ಇತರ ಕೃಷಿ ಬೆಳೆಗಳಿಗೆ ನಿರಂತರ ಹಾನಿಯಾಗುತ್ತಿದೆ. ಕಾಫಿ ಗಿಡಗಳ ಕೊಂಬೆಗಳು ಹಾನಿಗೊಳಗಾದರೂ ಅವು ಮತ್ತೆ ಬೆಳೆದು ಫಸಲು ನೀಡಲು ಸುಮಾರು ಐದು ವರ್ಷಗಳು ಬೇಕಾಗುತ್ತವೆ. ಆದರೆ ಅರಣ್ಯ ಇಲಾಖೆ ನೀಡುವ ಬೆಳೆ ನಷ್ಟ ಪರಿಹಾರವು ಈ ದೀರ್ಘಕಾಲದ ನಷ್ಟವನ್ನು ಪರಿಗಣಿಸುವುದಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ನಷ್ಟ ಅಂದಾಜಿಸಿ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಅತಿವೃಷ್ಟಿ, ಅನಾವೃಷ್ಟಿ ಹಾಗೂ ವನ್ಯಜೀವಿಗಳ ಹಾವಳಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನಷ್ಟವಾದಾಗ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಕೃಷಿ ಹಾಗೂ ಕಾಫಿ ತೋಟಗಳಿಗೆ ಸಂಬಂಧಿಸಿದ ಸಾಲಗಳನ್ನು ಸರ್ಫೇಸಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು. ರೈತರಿಗೆ ಒಂದು ಬಾರಿಯ ಸಾಲ ಇತ್ಯರ್ಥ ಯೋಜನೆ (ಒಟಿಎಸ್) ಜಾರಿಗೊಳಿಸಿದರೆ ಸಾಲ ಮರುಪಾವತಿಗೆ ಸಿದ್ಧರಿದ್ದಾರೆ ಎಂದು ತಿಳಿಸಿದರು.
ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯದಂತೆ ಕರೆ
ಕೆನರಾ ಬ್ಯಾಂಕ್‌ನ ಕ್ರಮಗಳನ್ನು ವಿರೋಧಿಸಿ ರೈತರು ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಗಳನ್ನು ಬೇರೆ ಬ್ಯಾಂಕ್‌ಗಳಿಗೆ ವರ್ಗಾಯಿಸಬೇಕು ಎಂದು ಮನು ಸೋಮಯ್ಯ ಕರೆ ನೀಡಿದರು. ಹೊಸದಾಗಿ ಉಳಿತಾಯ ಖಾತೆ ತೆರೆಯುವುದು, ನಿಶ್ಚಿತ ಠೇವಣಿ ಇಡುವುದು ಹಾಗೂ ಪಿಂಚಣಿ ಖಾತೆಗಳನ್ನು ನಿರ್ವಹಿಸುವುದರಿಂದ ದೂರವಿರಬೇಕು ಎಂದು ಮನವಿ ಮಾಡಿದರು. ರೈತರ ಹಿತಾಸಕ್ತಿಗೆ ಸ್ಪಂದಿಸುವಂತೆ ಬ್ಯಾಂಕ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಸರ್ಫೇಸಿ ಕಾಯ್ದೆಯಡಿ ಹರಾಜು ಮಾಡಲಾದ ರೈತರ ಆಸ್ತಿಗಳ ಕುರಿತು ಪರಿಶೀಲನೆ ನಡೆಸಿ, ಸಂಬಂಧಪಟ್ಟ ಪ್ರಕರಣಗಳಲ್ಲಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕು. ರೈತ ಸಂಘವು ಸಂತ್ರಸ್ತ ರೈತರ ಬೆಂಬಲಕ್ಕೆ ನಿಲ್ಲಲಿದೆ. ಅಗತ್ಯವಿದ್ದಲ್ಲಿ ಹೈಕೋರ್ಟ್ ಸೇರಿದಂತೆ ಉನ್ನತ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸಲು ರೈತರಿಗೆ ನೆರವು ನೀಡಲಾಗುವುದು ಎಂದರು.
ಕೆನರಾ ಬ್ಯಾಂಕ್‌ನಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಬ್ಯಾಂಕ್‌ನ ಎಲ್ಲ ಶಾಖೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಭವಿಕುಮಾರ್, ಶ್ರೀಮಂಗಲ ಅಧ್ಯಕ್ಷ ಕಂಬಕಾರ್ಯಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪೂಣಚ್ಚ, ಮಾಯಮುಡಿ ಅಧ್ಯಕ್ಷ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತಿರಮಾಡ ರಾಜ, ಶ್ರೀಮಂಗಲದ ಬೋಸ್ ವಿಶ್ವನಾಥ್, ತಿತಿಮತಿ ಹೋಬಳಿಯ ಚೆಪ್ಪುಡಿರ ಕಾರ್ಯಪ್ಪ ಹಾಗೂ ನಲ್ಲೂರು ಗ್ರಾಮದ ಪುಚ್ಚಿಮಾಡ ಲಾಲಾ ಪೂಣಚ್ಚ ಸೇರಿದಂತೆ ಇತರರು ಉಪಸ್ಥಿತರಿದ್ದರು.