Kodagu

ಖಾಸಗಿ ಬಸ್ ಕಾರ್ಮಿಕರ ಸಂಘದ 19ನೇ ವರ್ಷದ ಆಯುಧ ಪೂಜೆ - ಶಾಸಕ ಎ.ಎಸ್.ಪೊನ್ನಣ್ಣ ಭಾಗಿ

admincoorgdaily

ಖಾಸಗಿ ಬಸ್ ಕಾರ್ಮಿಕರ ಸಂಘದ 19ನೇ ವರ್ಷದ ಆಯುಧ ಪೂಜೆ - ಶಾಸಕ ಎ.ಎಸ್.ಪೊನ್ನಣ್ಣ ಭಾಗಿ
ವಿರಾಜಪೇಟೆ: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ(ರಿ) ವಿರಾಜಪೇಟೆ ವತಿಯಿಂದ 19ನೇ ವರ್ಷದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಪೂಜೆಯಲ್ಲಿ ಭಾಗವಹಿಸಿ ಶುಭ ಕೋರಿದರು.

ಪ್ರಸಾದ ಸ್ವೀಕರಿಸಿ ಮಾತನಾಡಿದ ಶಾಸಕರು, "ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ನಾವು ಚಲಾಯಿಸುವ ವಾಹನ ಮತ್ತು ಬಳಸುವ ಆಯುಧಗಳಿಗೆ ಪೂಜೆ ಮಾಡುವುದು ನಮ್ಮ ಸಂಪ್ರದಾಯ. ಭಾವ ಭಕ್ತಿಯಿಂದ ನಾವು ಉಪಯೋಗಿಸುವ ಸಾಧನಗಳಿಗೆ ಸಲ್ಲಿಸಿದ ಪೂಜೆಯನ್ನು ಸ್ವೀಕರಿಸಿದ ದೇವರು ಎಲ್ಲರಿಗೂ ಒಳಿತನ್ನು ಮಾಡಲಿ" ಎಂದು ಹಾರೈಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಸಂಘದವರು ಆಯುಧ ಪೂಜೆಯನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ದನ್ ಪ್ರಭು, ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಸುರೇಶ್ ದೇವಯ್ಯ, ವಿರಾಜಪೇಟೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೈನಾ ಜಗತ್, ಕಾಳಮಂಡ ಜಗತ್, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.