Kodagu

ಹುಲಿ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಶಾಸಕ ಎ.ಎಸ್. ಪೊನ್ನಣ್ಣ

admincoorgdaily

ಹುಲಿ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರಿಗೆ ಧೈರ್ಯ ತುಂಬಿದ ಶಾಸಕ ಎ.ಎಸ್. ಪೊನ್ನಣ್ಣ
ಪೊನ್ನಂಪೇಟೆ:ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಯಿಂದ ಆತಂಕಗೊಂಡ ಗ್ರಾಮಸ್ಥರಿಗೆ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಧೈರ್ಯ ತುಂಬಿದರು.

ದಿನಾಂಕ 02/11/2026 ರಂದು ಬೆಳ್ಳೂರು ಗ್ರಾಮದ ಬಾಚೀರ ವಾಸು ದೇವಯ್ಯ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ  ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಹಸುವಿನ ಮಾಲೀಕರು ಹಾಗೂ ಗ್ರಾಮಸ್ಥರನ್ನು ಭೇಟಿಯಾಗಿ ವನ್ಯಜೀವಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಗ್ರಾಮಸ್ಥರ ಆತಂಕವನ್ನು ದೂರಮಾಡಲು ಆದಷ್ಟು ಬೇಗ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕ್ಯಾಮೆರಾಗಳು ಹಾಗೂ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಹುಲಿಯ ಚಲನವಲನವನ್ನು ಪತ್ತೆಹಚ್ಚಿ, ಆದಷ್ಟು ಶೀಘ್ರವಾಗಿ ಅದನ್ನು ಸೆರೆಹಿಡಿಯುವ ಮೂಲಕ ಗ್ರಾಮಸ್ಥರಲ್ಲಿ ನೆಮ್ಮದಿ ಮತ್ತು ಸುರಕ್ಷತೆಯ ಭಾವನೆ ಮೂಡಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ ನವೀನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷರಾದ ತಿತೀರಾ ಪ್ರಭು ಸುಬ್ಬಯ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಬಾಲಕೃಷ್ಣ, ಡಿಸಿಸಿ ಸದಸ್ಯರು ಮುಕ್ಕಟಿರ ಸಂದೀಪ್, ಉದಯ, ಕುಂಡಚ್ಚಿರ ಮಂಜು ದೇವಯ್ಯ, ಫರ್ದಿನ್, ಅರಣ್ಯ ಇಲಾಖೆ ಅಧಿಕಾರಿಗಳಾದ ಡಿಎಫ್‌ಒ ವಿನಿತಾ ಚೌಹಾಣ್, ವೈಲ್ಡ್‌ಲೈಫ್ ಡಿಎಫ್‌ಒ ತಾಸಿಂ ಬಾನು, ಎಸಿಎಫ್ ಗೋಪಾಲ್, ಮಂಜುನಾಥ್, ಆರ್‌ಎಫ್‌ಒಗಳಾದ ರಾಕೇಶ್, ಶಿವರಾಮ್, ಗಂಗಾಧರ್ ಹಾಗೂ ವಿವೇಕ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.