Kodagu

ಪುಲಿಯಂಡ ಐನ್ ಮನೆಗೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ

admincoorgdaily

ಪುಲಿಯಂಡ ಐನ್ ಮನೆಗೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ
ವಿರಾಜಪೇಟೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಇಂದು ಪುಲಿಯಂಡ ಐನ್ ಮನೆಗೆ ಭೇಟಿ ನೀಡಿದರು.

ಕೊಡಗಿನಲ್ಲಿ ಐನ್ ಮನೆ ಸಂಪ್ರದಾಯ ವಿಶಿಷ್ಟವಾಗಿದ್ದು, ಕೊಡವ ಸಮುದಾಯದ ಪುಲಿಯಂಡ ಐನ್ ಮನೆಯಲ್ಲಿ ಪೂರ್ವಜರನ್ನು ಪೂಜಿಸಿ ಗೌರವಿಸುವ "ಗುರುಕಾರೋಣ ಕೊಡ್ಪೊ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಪ್ರದಾಯದಂತೆ ಐನ್ ಮನೆ ಆವರಣದ ಕೈಮಾಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೂರ್ವಜರಿಗೆ ಗೌರವ ಸಲ್ಲಿಸಲಾಯಿತು. ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ, "ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಕೃತಿಯನ್ನು ದೇವರೆಂದು ಪೂಜಿಸುವ ನಾವು ಪೂರ್ವಜರಿಗೂ ಗೌರವ ನೀಡುತ್ತೇವೆ. ಇದು ನಮ್ಮ ಪುರಾತನ ಸಂಪ್ರದಾಯ. ತಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸಮುದಾಯಗಳ ನೂರಾರು ಐನ್ ಮನೆಗಳ ಅಭಿವೃದ್ಧಿಗೆ ಅನುದಾನ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಸಂಸ್ಕೃತಿ ಹಾಗೂ ಪರಂಪರೆಯನ್ನು ಪೋಷಿಸಬೇಕು" ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುಲಿಯಂಡ ಕುಟುಂಬಸ್ಥರು ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಪುಲಿಯಂಡ ಕುಟುಂಬದ ಪಟ್ಟೇದಾರ ಜೆಫ್ರಿ ಸುಬ್ಬಯ್ಯ, ಕುಟುಂಬದ ಅಧ್ಯಕ್ಷ ಚಂಗಪ್ಪ, ಕಾರ್ಯದರ್ಶಿ ರತನ್ ಬಿದ್ದಪ್ಪ, ಸದಸ್ಯ ಪುಲಿಯಂಡ ರೋಷನ್, ಪಕ್ಷದ ಮುಖಂಡ ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.