Kodagu

ದಸರಾ ದಶಮಂಟಪ ಸಮಿತಿ ಹಾಗೂ 62 ವಿವಿಧ ಸಂಘ ಸಂಸ್ಥೆಗಳಿಂದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಪೌರ ಸನ್ಮಾನ

admincoorgdaily

ದಸರಾ ದಶಮಂಟಪ ಸಮಿತಿ ಹಾಗೂ 62 ವಿವಿಧ ಸಂಘ ಸಂಸ್ಥೆಗಳಿಂದ  ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಪೌರ ಸನ್ಮಾನ
ಮಡಿಕೇರಿ:-ಐಸಿಹಾಸಿಕ ಹಿನ್ನೆಲೆ ಗಳಿಸಿರುವ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಜನೋತ್ಸವ ದಸರಾವನ್ನಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ಬೈಲಾ ತಿದ್ದುಪಡಿಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ.
ನಗರದ ರೆಡ್‍ಬ್ರಿಕ್ಸ್ ಸಂಸ್ಥೆಯ ಸತ್ಕಾರ ಸಭಾಂಗಣದಲ್ಲಿ ದಸರಾ ದಶಮಂಟಪ ಸಮಿತಿ ಹಾಗೂ 62 ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಪೌರ ಸನ್ಮಾನ ಸ್ವೀಕರಿಸಿ’ ಅವರು ಮಾತನಾಡಿದರು.

ದಸರಾ ಸಿದ್ಧತೆಯನ್ನು ಏಪ್ರಿಲ್ ತಿಂಗಳಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು, ಮಂಟಪ ನಿರ್ಮಾಣಕ್ಕಾಗಿ ಹಲವರು ದುಡಿಯುತ್ತಾರೆ. ಮಡಿಕೇರಿ ದಸರಾದಲ್ಲಿ ಕರಗ ಉತ್ಸವದ ಜೊತೆಗೆ ಶೋಭಾಯಾತ್ರೆ ಅತೀ ಮುಖ್ಯ. ಆ ನಿಟ್ಟಿನಲ್ಲಿ ಮಂಟಪ ಸಮಿತಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಹೇಳಿದರು. 

ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿರಿಯರ ಸಲಹೆ, ಮಾರ್ಗದರ್ಶನದಂತೆ ನಡೆಯಲಾಗುವುದು, ದಸರಾ ಸಂಬಂಧಿಸಿದಂತೆ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಎಲ್ಲರೂ ಸಹಕಾರ ನೀಡಬಹುದಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅವರು ತಿಳಿಸಿದರು. 
ದಸರಾವನ್ನು ಜನೋತ್ಸವವಾಗಿ ಆಚರಿಸುವಲ್ಲಿ ಶಾಸಕನಾಗಿ ನನ್ನ ಜವಾಬ್ದಾರಿಯುತ ಕರ್ತವ್ಯವಾಗಿದ್ದು, ಅದನ್ನು ನಿರ್ವಹಿಸುತ್ತೇನೆ. ಸಾರ್ವಜನಿಕರ ಜೊತೆ ನಿರಂತರವಾಗಿ ಇರುತ್ತೇನೆ ಎಂದು ಶಾಸಕರು ಹೇಳಿದರು.
ಮಡಿಕೇರಿ ದಸರಾದಲ್ಲಿ ಮಹಿಳಾ, ಮಕ್ಕಳ, ಯುವ, ಕಾಫಿ, ಜಾನಪದ, ಕ್ರೀಡಾ ದಸರಾ ಹೀಗೆ ಎಲ್ಲಾ ರೀತಿಯ ದಸರಾಗಳು ಆಕರ್ಷಿಣಿವಾಗಿದ್ದವು. ಇನ್ನು ವರ್ಷದಿಂದ ವರ್ಷಕ್ಕೆ ದಸರಾವನ್ನು ಸುಧಾರಿಸಿಕೊಳ್ಳುವಲ್ಲಿ ಶ್ರಮಿಸಬೇಕು. ನಿಮ್ಮ ಮನೆ ಮಗನಾಗಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.  

ನಗರದ ಗಾಂಧಿ ಮೈದಾನದಲ್ಲಿ ಹೈಟೆಕ್ ವೇದಿಕೆ ನಿರ್ಮಾಣವಾಗುತ್ತಿದೆ. ಈಗ ರಸ್ತೆಯು ಸಹ ನಿರ್ಮಾಣವಾಗುತ್ತಿದ್ದು, ಕಾಮಗಾರಿಗೆ ಅಗತ್ಯ ಸಹಕಾರ ನೀಡಬೇಕು. ನಿಮ್ಮ ಊರಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದರು. 
ಮುಂದಿನ ದಿನಗಳಲ್ಲಿ ವಿದ್ಯುತ್ ಮಾರ್ಗವು ಭೂಮಿಯ ಒಳಭಾಗದಲ್ಲಿ ನಿರ್ಮಾಣವಾಗಲಿದೆ. ಸಾರ್ವಜನಿಕರು ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಬೇಕು. ತಮ್ಮ ಸಲಹೆ, ಮಾರ್ಗದರ್ಶವನ್ನು ಸದಾ ನೀಡುವಂತಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾವಿದ್ದು, ಬೈಲಾ ರಚಿಸಿ ಹಲವು ದಶಕಗಳೇ ಕಳೆದಿದೆ. ಶಾಸಕರ ನೇತೃತ್ವದಲ್ಲಿ ನೂತನ ಬೈಲಾ ರಚಿಸುವಂತಾಗಬೇಕು ಎಂದು ಸಲಹೆ ಮಾಡಿದರು. 
ಮಡಿಕೇರಿ ದಸರಾಗೆ ಮುಂಗಡ ಪತ್ರದಲ್ಲಿ ಅನುದಾನ ನಿಗದಿ ಮಾಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಟಿ.ಪಿ.ರಮೇಶ್ ಅವರು ಮನವಿ ಮಾಡಿದರು.

ಡಾ.ಮಂತರ್ ಗೌಡ ಅವರು ಪಕ್ಷತೀತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಜನಪ್ರೀಯತೆ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ದಸರಾ ಮಂಟಪಗಳ ಹಾಗೂ ದೇವಾಲಯಗಳ ಶಕ್ತಿ, ಪರಂಪರೆ ಮತ್ತು ಸಾರ್ವಜನಿಕರ ಸಹಭಾಗಿತ್ವವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೂ ದಸರಾ ವೈಭವವನ್ನು ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಸಿದರು.

ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷರಾದ ಕೆ.ಎಂ.ಬಿ.ಗಣೇಶ್ ಅವರು ಮಾತನಾಡಿ, ಮಡಿಕೇರಿ ದಸರಾಗೆ ಆರಂಭದಲ್ಲಿ ಎಂ.ಎಂ.ನಾಣಯ್ಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ 3 ಲಕ್ಷ ರೂ. ಕೊಡಿಸಿದ್ದರು. 

ತನ್ವೀನ್ ಸೇಠ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ 10 ಲಕ್ಷ ರೂ. ಸರ್ಕಾರದಿಂದ ಕೊಡಿಸಿದ್ದರು. 2013-14ನೇ ಸಾಲಿನಲ್ಲಿ ಕಾರ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ 75 ಲಕ್ಷ ರೂ. ಒದಗಿಸಲಾಗಿತ್ತು. 2014ರಲ್ಲಿ ಕೆ.ಜೆ.ಜಾರ್ಜ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು ಎಂದು ಅವರು ಸ್ಮರಿಸಿದರು.

ಶಾಸಕರು ಎಲ್ಲಾ ದೇವಾಲಯಗಳಿಗೂ ಅಗತ್ಯ ಸಹಕಾರ ನೀಡಿದ್ದಾರೆ. ಕಳೆದ ಬಾರಿ 1.50 ಕೋಟಿ ರೂ.ಬಿಡುಗಡೆ ಮಾಡಿಸಿದ್ದರು. ಈ ಬಾರಿ 2 ಕೋಟಿ ರೂ. ಕೊಡಿಸಿದ್ದಾರೆ ಎಂದು ಅವರು ಕೊಂಡಾಡಿದರು. 
ಶಾಸಕರು ಜನ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಈ ಬಾರಿ 2 ಕೋಟಿ ರೂ.ಗೆ ತಕ್ಕ ದಸರಾ ನಡೆದಿಲ್ಲ, ತಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿಲ್ಲ ಎಂದು ಕೆ.ಎಂ.ಬಿ.ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

ದಶಮಂಟಪ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಎಂ.ರಾಜೇಶ್ ಅವರು ಮಾತನಾಡಿ, ದಶ ಮಂಟಪ ಸಮಿತಿಯಲ್ಲಿ ಹಲವು ನಿಯಮಗಳನ್ನು ಬದಲಾಯಿಸಿಕೊಂಡು ನಡೆಯಬೇಕಿದೆ ಎಂದರು.

ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಅವರು ಮಾತನಾಡಿ, ಶಾಸಕರು ಕ್ರೀಯಾಶೀಲವಾಗಿ ತೊಡಗಿಸಿಕೊಂಡು ದಸರಾ ವಿಜೃಂಭಣೆಗೆ ಶ್ರಮಿಸಿದ್ದಾರೆ ಎಂದರು.

ಕರ್ನಾಟಕ ಪ್ಲಾಂಟರ್ಸ್ ಅಸೋಶಿಯೇಷನ್‍ನ ಅಧ್ಯಕ್ಷರಾದ ಎಂ.ಕಾರ್ಯಪ್ಪ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಅರ್ಚಕರಾದ ಚಾಮಿ, ಪೌರ ಕಾರ್ಮಿಕರಾದ ಲಕ್ಷ್ಮಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಸಂತೋಷ್ ಅನ್ವೇಕರ್, ದಸರಾ ಸಮಿತಿ ಉಪಾಧ್ಯಕ್ಷರಾದ ವಿ.ಜೆ.ಮೋಹನ್ ವೇದಿಕೆಯಲ್ಲಿದ್ದರು. 
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮತ್ತು ಕಾರ್ಯಕ್ರಮ ಸಂಚಾಲಕರಾದ ರಾಜೇಶ್ ಯಲ್ಲಪ್ಪ ಸ್ವಾಗತಿಸಿದರು. ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು.