ಬಾಳೆಗುಂಡಿ ಹಾಡಿ ರಸ್ತೆ ಕಾಮಗಾರಿಗೆ ಅಡ್ಡಿ: ಅರಣ್ಯ ಇಲಾಖೆಗೆ ಶಾಸಕ ಡಾ. ಮಂತರ್ ಗೌಡ ಖಡಕ್ ಎಚ್ಚರಿಕೆ
admincoorgdaily

ಕುಶಾಲನಗರ: ಬಾಳೆಗುಂಡಿ ಹಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಎಚ್ಚರಿಕೆ ನೀಡಿದರು.
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, "ಇದು ಅಸ್ತಿತ್ವದಲ್ಲಿರುವ ರಸ್ತೆ. ಇಲ್ಲಿನ ಶೇ.90 ರಷ್ಟು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಮನೆ ಕಟ್ಟಲು ಅವಕಾಶ ನೀಡಿ, ಈಗ ಮೂಲಭೂತ ಸೌಕರ್ಯವಾದ ರಸ್ತೆ ಮಾಡಲು ಅಡ್ಡಿ ಮಾಡುವುದು ಎಷ್ಟು ಸರಿ? ಮನೆ ತೆಗೆಯಲು ನಿಮಗೆ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದರು.
ಹಕ್ಕುಪತ್ರ ಇಲ್ಲದ ಕಡೆ ಪ್ರಶ್ನೆ ಮಾಡಬಹುದು, ಆದರೆ ಹಕ್ಕುಪತ್ರ ನೀಡಿದ ಕಡೆ ರಸ್ತೆ, ಕುಡಿಯುವ ನೀರು, ವಿದ್ಯುತ್ನಂತಹ ಮೂಲಭೂತ ಸೌಕರ್ಯಗಳನ್ನು ತಡೆಹಿಡಿಯುವುದು ಪ್ರಜಾಪ್ರಭುತ್ವದ ವೈಫಲ್ಯ. ಅರಣ್ಯವನ್ನು ಇಷ್ಟು ವರ್ಷ ಕಾಪಾಡಿಕೊಂಡು ಬಂದಿರುವುದೇ ಮೂಲ ನಿವಾಸಿಗಳಾದ ಟ್ರೈಬಲ್ ಸಮುದಾಯ. ಅವರಿಗೆ ತೊಂದರೆ ಕೊಡಲು ಬಿಡುವುದಿಲ್ಲ. ಇದು ನಮ್ಮ ಸರ್ಕಾರ ಕೊಡುತ್ತಿರುವ ಕೋಟಿ ಕೋಟಿ ರೂಪಾಯಿ ಅನುದಾನವನ್ನು , ಬಳಸಲು ಬಿಡಬೇಕು. ಇಲ್ಲವಾದರೆ ಅಧಿವೇಶನದಲ್ಲಿ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸುತ್ತೇನೆ," ಎಂದು ಎಚ್ಚರಿಸಿದರು.
"ಬಾಳೆಗುಂಡಿ ಹಾಡಿ ಅಭಿವೃದ್ಧಿಗೆ ₹1 ಕೋಟಿ ಅನುದಾನ ತಂದಿದ್ದೇವೆ. ಒಂದು ವರ್ಷದ ಹಿಂದೆ ₹30 ಲಕ್ಷದ ಕಾಮಗಾರಿ ಮಾಡಲಾಗಿದೆ. ಈಗ ಸಿಎಸ್ಆರ್ ಸೇರಿ ಉಳಿದ ಕಾಮಗಾರಿಗಳನ್ನು ಒಂದೇ ಗುದ್ದಲಿ ಪೂಜೆಯಲ್ಲಿ ಆರಂಭಿಸಿ ಪೂರ್ಣಗೊಳಿಸಬೇಕು. ಫುಡ್ ಕಿಟ್ ಕೂಡ 4-5 ತಿಂಗಳಿಂದ ನೀಡಿಲ್ಲ, ಕೂಡಲೇ ನೀಡಬೇಕು," ಎಂದು ಅಧಿಕಾರಿಗಳಿಗೆ ಸೂಚಿಸಿದರು.