Kodagu

ಪೆರಾಜೆಯಲ್ಲಿ 20 ಕೋಟಿ ವೆಚ್ಚದ 33/11 ಕೆವಿ ವಿದ್ಯುತ್ ಪ್ರಸರಣ ಘಟಕ ಕಾಮಗಾರಿ ವೀಕ್ಷಿಸಿದ ಶಾಸಕ ಪೊನ್ನಣ್ಣ

admincoorgdaily

ಪೆರಾಜೆಯಲ್ಲಿ 20 ಕೋಟಿ ವೆಚ್ಚದ 33/11 ಕೆವಿ ವಿದ್ಯುತ್ ಪ್ರಸರಣ ಘಟಕ ಕಾಮಗಾರಿ ವೀಕ್ಷಿಸಿದ ಶಾಸಕ ಪೊನ್ನಣ್ಣ
ಪೆರಾಜೆ: ಪೆರಾಜೆಯಲ್ಲಿ ಇತ್ತೀಚೆಗೆ ಪ್ರಾರಂಭಗೊಂಡು ಪ್ರಗತಿಯಲ್ಲಿರುವ 33/11 ಕೆವಿ ವಿದ್ಯುತ್ ಪ್ರಸರಣ ಘಟಕದ ಕಾಮಗಾರಿಯ ಪ್ರಗತಿಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರು ಇಂದು ವೀಕ್ಷಿಸಿದರು.

ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಕಾಮಗಾರಿಯ ಪ್ರಗತಿ ಹಾಗೂ ಪೂರ್ಣಗೊಳ್ಳುವ ಬಗ್ಗೆ ಮಾಹಿತಿ ಪಡೆದರು.

ಪೆರಾಜೆ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಕಾಳಜಿಯಿಂದ 20 ಕೋಟಿ ರೂ. ವೆಚ್ಚದಲ್ಲಿ ಈ ಘಟಕ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು, ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಪೂರೈಕೆ, ವೋಲ್ಟೇಜ್ ಸಮಸ್ಯೆ ನಿವಾರಣೆಯಾಗಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಲಘು ಉದ್ಯಮಗಳ ಸ್ಥಾಪನೆಗೂ ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷ ಶೌಕತ್ ಆಲಿ, ವಲಯ ಅಧ್ಯಕ್ಷ ಜೈರಾಮ್ ಪೆರುಮುಂಡ, ಪಕ್ಷದ ಪ್ರಮುಖರಾದ ತುಳಸಿ ಗಾಂಧಿ ಪ್ರಸಾದ್, ಸೂರಜ್ ಹೊಸೂರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.