Kodagu

ರಸ್ತೆಯನ್ನು ಮರು ಡಾಂಬರೀಕರಣ ಮಾಡಿಕೊಡುವಂತೆ ಆಗ್ರಹಿಸಿ ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಕೆ

admincoorgdaily

ರಸ್ತೆಯನ್ನು ಮರು ಡಾಂಬರೀಕರಣ ಮಾಡಿಕೊಡುವಂತೆ ಆಗ್ರಹಿಸಿ ಶಾಸಕ ಪೊನ್ನಣ್ಣ ಅವರಿಗೆ ಮನವಿ ಸಲ್ಲಿಕೆ
ವಿರಾಜಪೇಟೆ: ವಿರಾಜಪೇಟೆ ನಗರದಿಂದ ಮಡಿಕೇರಿಗೆ ಹಾದು ಹೋಗುವ ರಸ್ತೆಯ ಎಡಭಾಗದಲ್ಲಿರುವ ಚಿಕ್ಕಪೇಟೆಯಿಂದ ಬೋಯಿಕೇರಿವರೆಗಿನ ಸುಮಾರು 2.5 ಕಿ.ಮೀ. ರಸ್ತೆಯನ್ನು ತಕ್ಷಣ ಮರು ಡಾಂಬರೀಕರಣ ಮಾಡಿಕೊಡುವಂತೆ ಆಗ್ರಹಿಸಿ ಚಿಕ್ಕಪೇಟೆ ಹಾಗೂ ಬೋಯಿಕೇರಿ ಗ್ರಾಮದ ಸಾರ್ವಜನಿಕರು ಮತ್ತು ಆಟೋ ಚಾಲಕರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. 

     ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾಳೇಟಿರ ಬೋಪಣ್ಣ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

 ಈ ರಸ್ತೆಯು ಚಿಕ್ಕಪೇಟೆ ಮಾರ್ಗವಾಗಿ ಬೋಯಿಕೇರಿ, ಕೆದಮುಳ್ಳೂರು, ತೋರ, ಕ್ರಿಶ್ಚನ್ ಕಾಲೋನಿ, ಪಾಲಂಗಾಲ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ಅನೇಕ ದೊಡ್ಡ ಹಾಗೂ ಸಣ್ಣ ಪ್ರಮಾಣದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೂಡ ನಿತ್ಯ ನಗರಕ್ಕೆ ಬರಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕಳೆದ 17 ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಡಾಂಬರೀಕರಣ ಮಾಡಿದ್ದೇ ಕೊನೆಯಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ಮರು ಡಾಂಬರೀಕರಣ ನಡೆದಿಲ್ಲ. 

   ಇದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ರಸ್ತೆಯನ್ನು ಅಗೆದಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಕುರಿತು ಆಟೋ ಚಾಲಕರು ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಂಡು, ರಸ್ತೆ ಹಾಳಾಗಿರುವುದರಿಂದ ವಾಹನ ಚಲಾಯಿಸಲು ತೀವ್ರ ಸಮಸ್ಯೆಯಾಗುತ್ತಿದೆ, ಆದ್ದರಿಂದ ದಯವಿಟ್ಟು ತಕ್ಷಣ ಮರು ಡಾಂಬರೀಕರಣ ಮಾಡಿಕೊಡಿ ಎಂದು ವಿನಂತಿಸಿಕೊಂಡರು.  

  ಈ ಸಂದರ್ಭದಲ್ಲಿ ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಸೇರಿದಂತೆ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.