Kodagu

ಬಲ್ಲಮಾವಟಿಯಲ್ಲಿ‌ ಪ್ರಜಾಸೇವಾ ಅಭಿಯಾನ 80 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ, ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಜವಾಬ್ದಾರಿ: ಪೊನ್ನಣ್ಣ

admincoorgdaily

ಬಲ್ಲಮಾವಟಿಯಲ್ಲಿ‌ ಪ್ರಜಾಸೇವಾ ಅಭಿಯಾನ 80 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ, ಸಾರ್ವಜನಿಕರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಜವಾಬ್ದಾರಿ: ಪೊನ್ನಣ್ಣ
1002818193.jpg


ಮಡಿಕೇರಿ:- ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ ಗ್ರಾ.ಪಂ.ಚಂಗೇಟಿರ ವೇದಿಕೆ ಸಭಾಂಗಣದಲ್ಲಿ  ಶನಿವಾರ ನಡೆದ ಪ್ರಜಾಸೇವಾ ಅಭಿಯಾನದಲ್ಲಿ 80 ಕ್ಕೂ  ಹೆಚ್ಚು ಅರ್ಜಿ ಸಲ್ಲಿಕೆಯಾದವು.

      ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಂದರ್ಭದಲ್ಲಿ ಕಂದಾಯ, ಅರಣ್ಯ, ಪಂಚಾಯತ್ ರಾಜ್, ಸೆಸ್ಕ್, ಲೋಕೋಪಯೋಗಿ, ಸಣ್ಣ ನೀರಾವರಿ, ಕೆ ಎಸ್ ಆರ್ ಟಿಸಿ, ಕೃಷಿ ಮತ್ತಿತರ ಇಲಾಖೆ ಸಂಬಂಧ ಸಾರ್ವಜನಿಕರು ಹೆಚ್ಚು ಅರ್ಜಿಗಳು ಸಲ್ಲಿಸಿದರು.
       ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸಾರ್ವಜನಿಕರಿಂದ ಸಲ್ಲಿಕೆ ಆಗಿರುವ ಶೇ 99 ಅರ್ಜಿಗಳಲ್ಲಿನ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದರು. 

      ಕಾಡಾನೆ ದಾಳಿಯಿಂದ ಉಂಟಾಗಿರುವ ಬೆಳೆಹಾನಿ ಪರಿಹಾರ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೌಲಭ್ಯ, ವಿದ್ಯುತ್ ಸಂಪರ್ಕ, ಬಸ್ ಸೌಲಭ್ಯ ಕಲ್ಪಿಸುವುದು, ಸೇತುವೆ ನಿರ್ಮಾಣ ಮತ್ತಿತರ ಮೂಲ ಸೌಲಭ್ಯಕ್ಕೆ ಹೆಚ್ಚಿನ ಅರ್ಜಿಗಳು ಸಲ್ಲಿಯಾಗಿದ್ದು, ಹಲವು ಮನವಿಗೆ ಸ್ಥಳದಲ್ಲಿಯೇ ಪರಿಹರಿಸಲಾಗಿದೆ ಎಂದರು.

     ಜನಪ್ರತಿನಿಧಿಗಳ ಜತೆ ಅಧಿಕಾರಿಗಳು ಸಹ ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ, ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಸ್ಪಂದನೆ ದೊರೆಯಲಿದೆ. ಆ ದಿಸೆಯಲ್ಲಿ ಸಾರ್ಥಕತೆ ಸಿಗಬೇಕಾದರೆ ಆತ್ಮತೃಪ್ತಿ ಹಾಗೂ ಖುಷಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

       ಜನರಿಗೆ ಬೇಕಿರುವುದು ಕನಿಷ್ಠ ಮೂಲ ಸೌಲಭ್ಯಗಳು, ಅವುಗಳನ್ನು ತಲುಪಿಸಿದರೆ, ಕೃತಜ್ಞತೆ ಸಲ್ಲಿಸುತ್ತಾರೆ. ಇದರಿಂದ ಸಾರ್ಥಕತೆ ದೊರೆಯಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಒತ್ತಿ ಹೇಳಿದರು.

      ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ, ಅದನ್ನು ಅರಿತು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

       ಹಲವು ಒತ್ತಡಗಳ‌ ನಡುವೆಯೂ ಬಡವರ ಮತ್ತು ಶೋಷಿತರ ಸಮಸ್ಯೆ ಬಗೆಹರಿಸುವುದು ಅತಿಮುಖ್ಯವಾಗಿದೆ ಎಂದರು.
 
       ಸಭೆ ಆರಂಭದಲ್ಲಿ ಮಾತನಾಡಿದ ಶಾಸಕರು
 ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಸರ್ಕಾರದ ಹಲವು ಸವಲತ್ತುಗಳನ್ನು ತಲುಪಿಸುವುದು ಹಾಗೂ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ 'ಪ್ರಜಾಸೇವಾ ಅಭಿಯಾನ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಉಪಯೋಗವನ್ನು ನಾಗರಿಕರು ಪಡೆದುಕೊಳ್ಳುವಂತಾಗಬೇಕು ಎಂದರು.

            ಸಾರ್ವಜನಿಕರ ನಿರೀಕ್ಷೆಗಳು ಸಾಕಷ್ಟು ಇವೆ, ಆ ದಿಸೆಯಲ್ಲಿ  ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಸುವುದು ಅತಿ ಮುಖ್ಯವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಪ್ರತಿಪಾದಿಸಿದರು.

        ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಪ್ರಜಾಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು  ಎ.ಎಸ್.ಪೊನ್ನಣ್ಣ ಅವರು ನುಡಿದರು.

   ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯ ಮಂಜೂರಾತಿ ಆದೇಶ ಪತ್ರವನ್ನು ಅರ್ಹರಿಗೆ ವಿತರಿಸಿದರು.

    ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದಿಂದ ಕೈಗೊಳ್ಳಲಾಗಿರುವ ಹಲವು ಯೋಜನೆಗಳನ್ನು ಗ್ರಾ.ಪಂ.ಗೆ ಶಾಸಕರು ಹಸ್ತಾಂತರಿಸಿದರು. 

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಯನ್ನು ಗ್ರಾ.ಪಂ.ಗೆ ಈಗಾಗಲೇ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಹಸ್ತಾಂತರಗೊಳಿಸಿರುವ ಎಚ್ ಡಿ ಪಿ ಇ ಪೈಪ್ ಲೈನ್ ದುರಸ್ತಿಗಾಗಿ ಜೋಡಣೆ ಮಾಡಲು electro fusion machine ಗಳನ್ನು ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹಸ್ತಾಂತರಿಸಿದರು.
 
     ತಾ.ಪಂ.ಇಒ ಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವಲ್ಲಿ ಪ್ರಜಾಸೇವಾ ಅಭಿಯಾನ ಹಮ್ಮಿಕೊಂಡಿದೆ ಎಂದರು.

         ತಹಶಿಲ್ದಾರರಾದ ಶ್ರೀಧರ ಅವರು ಮಾತನಾಡಿ ಜನರ ನೋವು ಮತ್ತು ಸಂಕಷ್ಟವನ್ನು ಸ್ಥಳೀಯವಾಗಿ ಪರಿಹರಿಸುವಲ್ಲಿ ಆದ್ಯತೆ ಮೇಲೆ ಕಾರ್ಯ ನಿರ್ವಹಿಸಲು ಪ್ರಜಾಸೇವಾ ಅಭಿಯಾನ ಸಹಕಾರಿ ಆಗಿದೆ  ಎಂದರು.

          ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಅಕ್ರಮ ಸಕ್ರಮ ಸಮಿತಿ ತಾಲ್ಲೂಕು ಅಧ್ಯಕ್ಷರಾದ ನೆರವಂಡ ಉಮೇಶ್, ಕಾವೇರಿ ಜಲಾನಯನ‌ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಸೂರಜ್ ಹೊಸೂರು, ಪ್ರಮುಖರಾದ ಅಬ್ದುಲ್ ರೆಹಮಾನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಸೆಂಥಿಲ್ ಕುಮಾರ್ ಇತರರು ಇದ್ದರು.

     ದೊಡ್ಡ ಪುಲಿಕೋಟು ಗ್ರಾಮದ‌ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು, ಉಪ ತಹಶಿಲ್ದಾರರಾದ ಪ್ರಕಾಶ್ ನಿರೂಪಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.