Kodagu

ಗೋಪಾಲಪುರ ಸಂತ ಅಂತೋಣಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಜನ್ಮೋತ್ಸವ

admincoorgdaily

ಗೋಪಾಲಪುರ ಸಂತ ಅಂತೋಣಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಜನ್ಮೋತ್ಸವ
ಶನಿವಾರಸಂತೆ;
 ಗೋಪಾಲಪುರದ ಪ್ರಸಿದ್ಧ ಸಂತ ಅಂತೋಣಿ ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಜನ್ಮೋತ್ಸವವನ್ನು (ಮೊಂತಿ ಹಬ್ಬ) ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಚರ್ಚ್‌ನಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಮೊದಲಿಗೆ ವಿವಿಧ ಬಗೆಯ ಆಕರ್ಷಕ ಹೂವುಗಳಿಂದ ಅಲಂಕರಿಸಲಾಗಿದ್ದ ಮಾತೆ ಮರಿಯಮ್ಮನವರ ಭವ್ಯ ತೇರಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. 
ಭಕ್ತಾದಿಗಳ ಜಯಘೋಷ, ಪ್ರಾರ್ಥನೆಯೊಂದಿಗೆ ತೇರನ್ನು ಚರ್ಚ್‌ನ ಸುತ್ತಲೂ ಪ್ರದಕ್ಷಿಣೆ ಹಾಕಿಸುವ ಮೂಲಕ ಶ್ರದ್ಧಾಭಕ್ತಿಯಿಂದ ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯ ನಂತರ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ಫಾದರ್ ಕ್ರಿಸ್ಟೋಫರ್ ಸಾಗರ್ ರಾಜ್ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಾಯಿತು. 
ಹಬ್ಬದ ಪ್ರಮುಖ ಸಂಪ್ರದಾಯದಂತೆ ಪ್ರಕೃತಿಯ ಕೊಡುಗೆಯಾದ ಹೊಸ ಭತ್ತದ ತೆನೆಗಳನ್ನು ಮಂತ್ರಿಸಿ, ಆಶೀರ್ವದಿಸಲಾಯಿತು. ಧರ್ಮಗುರುಗಳು ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ ಈ ಪವಿತ್ರ ಭತ್ತದ ತೆನೆಗಳನ್ನು ವಿತರಿಸಿದರು.

ಮಾತೆ ಮರಿಯಮ್ಮನವರ ಜನ್ಮದಿನದ ಸವಿನೆನಪಿಗಾಗಿ ಚರ್ಚ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. 
ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಮನೆಗಳಿಂದ ತಂದಿದ್ದ ಬಣ್ಣ ಬಣ್ಣದ ಹೂವುಗಳನ್ನು ಹಿಡಿದು, ಮಾತೆಯ ಭಕ್ತಿಗೀತೆಗಳನ್ನು ಹಾಡುತ್ತಾ ಅವರ ಪ್ರತಿಮೆಗೆ ಹೂಮಳೆಗರೆದು ಭಕ್ತಿ ನಮನ ಸಲ್ಲಿಸಿದರು.

ಕಾರ್ಯಕ್ರಮದ ಉದ್ದಕ್ಕೂ ಧರ್ಮಗುರುಗಳು ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಚನ ನೀಡಿದರು. ಹಬ್ಬದ ಕೊನೆಯಲ್ಲಿ ಚರ್ಚ್‌ ವತಿಯಿಂದ ನೆರೆದಿದ್ದ ಸಹಸ್ರಾರು ಭಕ್ತಾದಿಗಳಿಗೆ ಪ್ರೀತಿಯ ಭೋಜನದ (ಅನ್ನಸಂತರ್ಪಣೆ) ವ್ಯವಸ್ಥೆಯನ್ನು ಮಾಡಲಾಗಿತ್ತು. ಗೋಪಾಲಪುರ ಮತ್ತು 
ಬಿಟಿಕಟ್ಟೆ ಮತ್ತು ಶನಿವಾರಸಂತೆ ಮತ್ತು ಕಳಲೆಹಸೂರು ಮತ್ತು ಕೊಡ್ಲಿಪೇಟೆ ಸುತ್ತಮುತ್ತಲಿನ  ಕ್ರೈಸ್ತ ಬಾಂಧವರು ಈ ಭಕ್ತಿಪೂರ್ವಕ ಆಚರಣೆಯಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದರು.