Kodagu

ಸಿದ್ದಾಪುರದಲ್ಲಿ ಮಾತೆ ಮರಿಯಮ್ಮನವರ ಜಯಂತಿ ಆಚರಣೆ

admincoorgdaily

ಸಿದ್ದಾಪುರದಲ್ಲಿ ಮಾತೆ ಮರಿಯಮ್ಮನವರ ಜಯಂತಿ ಆಚರಣೆ
ಸಿದ್ದಾಪುರ:-
ಸಂತ ಜೋಸೆಫ್ ದೇವಾಲಯದಲ್ಲಿ ಮಾತೆ ಮರಿಯಮ್ಮನವರ ಜಯಂತಿಯನ್ನು ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಿದರು.

ಜಯಂತಿ ಹಬ್ಬದ ಅಂಗವಾಗಿ ಕಳೆದ ಒಂಬತ್ತು ದಿನಗಳಿಂದ ನವೇನ ಪ್ರಾರ್ಥನೆಯ ಮೂಲಕ ವಿಶೇಷ ಸಿದ್ಧತೆಗಳನ್ನು ನಡೆಸಲಾಗಿತ್ತು ಮಂಗಳವಾರ ಸಂಜೆ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಆಡಂಬರದ ಗಾಯನ ಬಲಿಪೂಜೆ ನೆರವೇರಿಸಲಾಯಿತು.

ಬಲಿಪೂಜೆಯ ಬಳಿಕ ಸಿದ್ದಾಪುರ ಸಂತ ಜೋಸೆಫ್ ದೇವಾಲಯದಿಂದ ಹಳೆಸಿದ್ದಾಪುರದಲ್ಲಿರುವ ಮೇರಿ ಮಾತೆಯ ಗೋಪುರದವರೆಗೆ ಮಾತೆ ಮರಿಯಮ್ಮನವರ ಪಲ್ಲಕ್ಕಿಯೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಭಕ್ತಿಗೀತೆಗಳೊಂದಿಗೆ ಹೆಜ್ಜೆ ಹಾಕಿದರು ಭಕ್ತರು ತಾವು ತಂದಿದ್ದ ಹೂವುಗಳನ್ನು ಮಾತೆ ಮರಿಯಮ್ಮನವರಿಗೆ ಅರ್ಪಿಸಿ, ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಭಕ್ತರಲ್ಲಿ ಧಾರ್ಮಿಕ ಭಾವನೆ ಮನೆಮಾಡಿತ್ತು ಹಬ್ಬದ ಅಂಗವಾಗಿ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.

ದೇವಾಲಯದ ಧರ್ಮಗುರು ಅಂಥೋನಪ್ಪ ಅವರು ವಿಶೇಷ ಬಲಿಪೂಜೆ ಅರ್ಪಿಸಿ, ಭಕ್ತರಿಗೆ ಹಬ್ಬದ ಸಂದೇಶ ನೀಡಿದರು. ಮಾತೆ ಮರಿಯಮ್ಮನವರ ಕೃಪೆ ಎಲ್ಲರ ಮೇಲಿರಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.