ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನಲ್ಲಿ ಸಂಭ್ರಮದ ಮಾತೆ ಮರಿಯಮ್ಮ ಜಯಂತಿ ಆಚರಣೆ
admincoorgdaily

ವಿರಾಜಪೇಟೆ:
ವಿರಾಜಪೇಟೆಯ ಐತಿಹಾಸಿಕ ಕ್ರೈಸ್ತ ದೇವಾಲಯವಾದ ಸಂತ ಅನ್ನಮ್ಮ ಚರ್ಚ್ ನಲ್ಲಿ ಮೇರಿಮಾತೆ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕಳೆದ ಒಂಬತ್ತು ದಿವಸಗಳಿಂದ ಚರ್ಚ್ ನಲ್ಲಿ ವಿಶೇಷ ನವೆನ ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಹಬ್ಬದ ದಿವಸವಾದ ಮಂಗಳವಾರದಂದು ಚರ್ಚ್ ನಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದು ಪ್ರಧಾನ ಗುರುಗಳು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಹಬ್ಬದ ಪ್ರಯುಕ್ತ ಚರ್ಚ್ ನಲ್ಲಿ ಪ್ರಬೋಧನೆ, ಬೈಬಲ್ ಪಠಣ, ಗಾಯನ ವೃಂದದವರಿಂದ ದೇವರ ನಾಮದ ಸ್ತುತಿ, ಮೊದಲಾದ ಕಾರ್ಯಕ್ರಮಗಳು ಜರುಗಿದವು.ಧರ್ಮಗುರುಗಳು ಆಶೀರ್ವಚನದ ಮೂಲಕ ಹಬ್ಬದ ಸಂದೇಶವನ್ನು ನೀಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ತದನಂತರ ಸಂತ ಅನ್ನಮ್ಮ ಚರ್ಚ್ ನ ಒಳ ಆವರಣದಲ್ಲಿರುವ ಮಾತೆ ಮೇರಿಯವರ ಪ್ರತಿಮೆಗೆ ನೆರೆದಿದ್ದ ಭಕ್ತಾದಿಗಳು ಪುಷ್ಪಾರ್ಚನೆಯನ್ನು ಮಾಡಿದರು.
ಭಕ್ತರು ಹಬ್ಬದ ಸಂದೇಶವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ತದನಂತರ ಆಗಮಿಸಿದ್ದ ಸರ್ವ ಭಕ್ತಾದಿಗಳಿಗೆ ಅನ್ನದಾನವು ಜರುಗಿತು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಚರ್ಚ್ ನ ಸಹಾಯಕ ಗುರುಗಳು ಫಾ. ವಿಲ್ಫ್ರೆಡ್, ಚರ್ಚ್ ಪಾಲನಾ ಸಮಿತಿಯವರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.