ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಮಾತೆ ಮರಿಯಮ್ಮರವರ ಜನ್ಮದಿನ ಆಚರಣೆ
admincoorgdaily

ಸುಂಟಿಕೊಪ್ಪ:ಸಂತ ಅಂತೋಣಿ ದೇವಾಲಯದಲ್ಲಿ ಮಾತೆ ಮರಿಯಮ್ಮರವರ ಜನ್ಮದಿನ (ಮೊಂತಿ ಫೆಸ್ಟ್) ವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಮರಿಯಮ್ಮ ನವರ ಜನ್ಮದಿನದ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಅಡಂಬರ ದಿವ್ಯ ಬಲಿಪೂಜೆ ನೆರವೇರಿತು. ಮೊಂಬತಿ ಹಿಡಿದು ಮಾತೆ ಮರಿಯಮ್ಮನವರ ಸ್ವರೂಪದೊಂದಿಗೆ ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶೃದ್ಧಾ lಭಕ್ತಿಯಿಂದ ಪುಷ್ಪನಮನ ಸಲ್ಲಿಸಿದರು. ಸಣ್ಣ ಮಕ್ಕಳು ಮತ್ತು ಯುವತಿಯರಿಗೆ ಏರ್ಪಡಿಸಲಾಗಿದ್ದ ಮಾತೆ ಮರಿಯಮ್ಮನವರ ವಿನ್ಯಾಸದ ವಸ್ತ್ರಲಂಕಾರದ ಸ್ಪರ್ಧೆಯ ನಂತರ ನೂತನ ಭತ್ತದ ತೆನೆಯನ್ನು ವಿತರಿಸುವ ಮೂಲಕ ಮಾತೆ ಮರಿಯಮ್ಮನವರ ಜಯಂತಿಯ ಸಂಭ್ರಮಾಚರಣೆಗೆ ಮುನ್ನುಡಿಯಿಡಲಾಯಿತು.
ಸಂತ ಅಂತೋಣಿ ದೇವಾಲಯದಲ್ಲಿ ಬೆಳಿಗ್ಗೆ 7.30 ರಿಂದ ವಿಶೇಷ ಪ್ರಾರ್ಥನೆ ಆರಂಭಗೊಂಡು ಮಡಿಕೇರಿ ಸಂತ ಮರಡಿಯೂರು ದೇವಾಲಯದ ಧರ್ಮಗುರುಗಳಾದ ರೆ.ಫಾ. ಜಾರ್ಜ್ ದೀಪಕ್, ಮೈಸೂರಿನ ಧರ್ಮಕೇಂದ್ರದ ರೆ. ಫಾ. ಸಿಲ್ವೆಮುತ್ತು ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೆ. ಫಾ. ವಿಜಯಕುಮಾರ್ ಅಡಂಬರ ದಿವ್ಯ ಬಲಿಪೂಜೆ ಪ್ರಭೋದನೆಯನ್ನು ಸಮರ್ಪಿಸಿದರು.
ಸೆ. 8 ರಂದು ಯೇಸುಕ್ರಿಸ್ತರ ತಾಯಿಯವರಾದ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ವನ್ನು ಜಗತ್ತಿನಾದ್ಯಂತ ಆಚರಿಸುತ್ತಾರೆ. ಇದಕ್ಕೆ ಪೂರ್ವಭಾವಿಯಾಗಿ ನಡೆಯುವ 9 ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳ ದಿವ್ಯಬಲಿಪೂಜೆ, ಪ್ರಭೋದನೆಯನ್ನು ಹಾಗೂ ನೊವೇನಾ ಪ್ರಾರ್ಥನೆ ಪುಷ್ಪಾನಮನಗಳನ್ನು ಸಲ್ಲಿಸಲಾಯಿತು.
ನೊವೇನಾ ಪ್ರಾರ್ಥನೆ ಸಂದರ್ಭದಲ್ಲಿ ವಿಶೇಷವಾಗಿ ಕನ್ಯಾಮಾತೆ ಮರಿಯಮ್ಮರ ವರಿಗೆ ವಿವಿಧ ಬಗೆಯ ಸೀರೆಗಳನ್ನು ತೊಡಿಸಲಾಗುವುದು. ಚಿಕ್ಕ ಮಕ್ಕಳು, ಯವಕ, ಯುವತಿಯರು ಹಾಗೂ ಹಿರಿಯರು ಪ್ರತಿ ದಿನ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಗಾಯನ ಬಲಿಪೂಜೆಯಲ್ಲಿ ಪಾಲ್ಗೊಂಡು ನಂತರ ತಾವು ತಂದ ಹೂವುಗಳನ್ನು ಮಾತೆ ಮರಿಯಮ್ಮರವರಿಗೆ ಸಮರ್ಪಿಸುವುದು ಆಚಾರವಾಗಿದೆ.
9 ದಿನಗಳ ನೊವೇನಾ ಪ್ರಾರ್ಥನೆ ಕಾರ್ಯಕ್ರಮಗಳೊಂದಿಗೆ 10ನೇ ದಿನ ಸೆ.8 ರಂದು ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಮನೆ ಮನೆಗಳಲ್ಲಿ ನೂತನವಾಗಿ ನೀಡಲಾದ ಭತ್ತದ ತೆನೆಗಳನ್ನು ತಾವು ತಯಾರಿಸುವ ಖಾದ್ಯ ಭೋಜನಗಳೊಂದಿಗೆ ಸೇರಿಸಿ ಸೇವಿಸುವುದು ಈ ಹಬ್ಬದ ವಿಶೇಷತೆಯಾಗಿದೆ.
ಮೊಂತಿ ಪೆಸ್ತ್ ಅಂಗವಾಗಿ ಮಂಗಳವಾರದಂದು ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪ್ರಭೋದನೆಯನ್ನು ಮೈಸೂರು ಧರ್ಮಕೇಂದ್ರದ ಧರ್ಮಗುರುಗಳಾದ ರೆ.ಫಾ. ಸಿಲ್ವೆಮುತ್ತು ನೆರವೇರಿಸಿದರು. ಅಡಂಬರ ಬಲಿಪೂಜೆಯನ್ನು ಜಾರ್ಜ್ ದೀಪಕ್ ಹಾಗೂ ದೇವಾಲಯದ ಧರ್ಮಗುರುಗಳಾದ ರೆ. ಫಾ. ವಿಜಯಕುಮಾರ್ ನೆರವೇರಿಸಿ, ಮೊಂತಿಫೆಸ್ಟ್ ಅಂಗವಾಗಿ ನೂತನ ಭತ್ತದ ತೆನೆಗಳನ್ನು ಆರ್ಶಿವಚಿಸಿ ವಿತರಿಸಿದರು.ಕ್ರೈಸ್ತ ಬಾಂಧವರು ಮನೆ ಮನೆಗಳಿಂದ ಒಗ್ಗೂಡಿಸಿ ತಂದಿದ್ದ ಬಗೆ ಬಗೆಯ ಪುಷ್ಪಗಳನ್ನು ಎಲ್ಲರೂ ಕನ್ಯಾಮಾತೆ ಮರಿಯಮ್ಮರವರಿಗೆ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ಮಾತೆ ಮರಿಯಮ್ಮನವರು ಭುವಿಯಲ್ಲಿ ಮಾನವರಿಗೆ ದರ್ಶನ ನೀಡಿದ ಸಂದರ್ಭ ಅವರ ಪ್ರತಿರೂಪದ ವಸ್ತ್ರ ಅಲಂಕಾದ ಸ್ಪರ್ಧೆಯಲ್ಲಿ 5 ವರ್ಷದ ಹೆಣ್ಣು ಮಕ್ಕಳಿಂದ ಹಾಗೂ ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ನೆರೆದಿದ್ದ ಭಕ್ತಾಧಿಗಳ ಮನಸೂರೆಗೊಳಿಸಿದರು.
ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತೆ ಮರಿಯ್ಮರವರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು, ಪಾಲನ ಸಮಿತಿಯ ಪದಾಧಿಕಾರಿಗಳು, ವಿನ್ಸೆಂಟ್ ಡಿಪೌಲ್, ಮರಿಯಮ್ಮ ಸೇನೆ, ಸೋಲಾಮ್ ಬ್ರರ‍್ಸ್ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಬೆಳಗಿನ ಉಪಹಾರವನ್ನು ವಿತರಿಸಲಾಯಿತು.