ನಿಟ್ಟೂರು ಬಸ್ ತಂಗುದಾಣದ ಗೋಡೆಯ ಅಂದಗೆಡಿಸುತ್ತಿರುವ ಸಿನಿಮಾ ಪೋಸ್ಟರ್‌ಗಳು
admincoorgdaily

ಪೊನ್ನಂಪೇಟೆ: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಗೆ ಆದ್ಯತೆ ನೀಡಿ ಬಸ್ ತಂಗುದಾಣಗಳು ಹಾಗೂ ನೀರಿನ ಟ್ಯಾಂಕ್‌ಗಳಿಗೆ ಬಣ್ಣ ಬಳಿದು ಅಂದಗೊಳಿಸಿದ್ದರೂ, ಇದೀಗ ಸಿನಿಮಾ ಪ್ರಚಾರದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಸಾರ್ವಜನಿಕ ಆಸ್ತಿಗಳ ಅಂದಗೆಡಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಗೋಣಿಕೊಪ್ಪದ ಚಲನಚಿತ್ರ ಮಂದಿರವೊಂದರ ಚಿತ್ರಗಳ ಪ್ರಚಾರಕ್ಕಾಗಿ ನಿಟ್ಟೂರು ಗ್ರಾಮ ವ್ಯಾಪ್ತಿಯ ಬಸ್ ತಂಗುದಾಣಗಳ ಗೋಡೆಗಳು ಹಾಗೂ ನೀರಿನ ಟ್ಯಾಂಕ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸ್ಥಳೀಯ ಆಡಳಿತದ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಹಿಂದಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅವಧಿಯಲ್ಲಿ ಸ್ವಚ್ಛತೆಗೆ ಒತ್ತು ನೀಡಿ ಪಂಚಾಯಿತಿ ವ್ಯಾಪ್ತಿಯ ಬಸ್ ತಂಗುದಾಣಗಳು, ನೀರಿನ ಟ್ಯಾಂಕ್‌ಗಳು ಸೇರಿದಂತೆ ವಿವಿಧ ಸಾರ್ವಜನಿಕ ಆಸ್ತಿಗಳಿಗೆ ಬಣ್ಣ ಬಳಿದು ಸ್ವಚ್ಛ ಹಾಗೂ ಸುಂದರವಾಗಿ ಕಂಗೊಳಿಸುವಂತೆ ಮಾಡಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವುಗಳ ಮೇಲೆ ಪ್ರಚಾರದ ಪೋಸ್ಟರ್‌ಗಳು ರಾರಾಜಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕ ಆಸ್ತಿಗಳನ್ನು ಯಾವುದೇ ನಿಯಂತ್ರಣವಿಲ್ಲದೆ ಪ್ರಚಾರದ ಸಾಧನಗಳಾಗಿ ಬಳಸುವುದನ್ನು ಸಂಬಂಧಿಸಿದವರು ತಕ್ಷಣ ನಿಲ್ಲಿಸಬೇಕು. ಈಗಾಗಲೇ ಅಂಟಿಸಿರುವ ಪೋಸ್ಟರ್‌ಗಳನ್ನು ತೆರವುಗೊಳಿಸಿ, ಗೋಡೆಗಳಿಗೆ ಮರುಬಣ್ಣ ಬಳಿದು ತಂಗುದಾಣಗಳನ್ನು ಹಿಂದಿನ ಸ್ಥಿತಿಗೆ ತರಬೇಕು ಎಂದು ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕಾಟಿಮಾಡ ಶರೀನ್ ಮತ್ತಣ್ಣ ಆಗ್ರಹಿಸಿದ್ದಾರೆ.
ಸಿನಿಮಾ ಸೇರಿದಂತೆ ಯಾವುದೇ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕ ಸ್ಥಳಗಳನ್ನು ಬಳಸಬೇಕಾದರೆ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆದು, ನಿಗದಿತ ಸ್ಥಳದಲ್ಲಿ ಪ್ರತ್ಯೇಕ ನಾಮಫಲಕ ಅಥವಾ ಪ್ರಚಾರ ಫಲಕ ಅಳವಡಿಸುವ ವ್ಯವಸ್ಥೆ ಮಾಡಬೇಕು. ನಿಯಮ ಉಲ್ಲಂಘಿಸಿ ಸಾರ್ವಜನಿಕ ಆಸ್ತಿಗಳ ಅಂದಗೆಡಿಸುವವರ ವಿರುದ್ಧ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.