ಮುಗುಟಗೇರಿ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಸಂಭ್ರಮದ ಪುತ್ತರಿ ಆಚರಣೆ
admincoorgdaily

ಪೊನ್ನಂಪೇಟೆ: ತಾಲೂಕಿನ ಮುಗುಟಗೇರಿ ಗ್ರಾಮದ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಶ್ರೀ ತೊಣಕೇರಿ ಭಗವತಿ ದೇವಸ್ಥಾನದ ವತಿಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಪುತ್ತರಿಯನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಶ್ರೀ ತೊಣಕೇರಿ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು. ಬಳಿಕ ಊರಿನ ತಕ್ಕ ಮುಖ್ಯಸ್ಥರ ನೇತೃತ್ವದಲ್ಲಿ ತಳಿಯತಕ್ಕಿ ಬೊಳಿಚದೊಂದಿಗೆ ಕದಿರು ತೆಗೆಯಲು ಗದ್ದೆಗೆ ಮೆರವಣಿಗೆ ತೆರಳಲಾಯಿತು.
ಗ್ರಾಮಸ್ಥರಾದ ಮುದ್ದಿಯಡ ಗಣೇಶ್ ಅವರ ಗದ್ದೆಯಲ್ಲಿ ದೇವಸ್ಥಾನದ ಅರ್ಚಕ ಅಶೋಕ್ ಭಟ್ ಅವರು ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ದೇವಿಯನ್ನು ಸ್ತುತಿಸಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬಳಿಕ ಗ್ರಾಮಸ್ಥರು ಭಕ್ತಿಭಾವದಿಂದ ಕದಿರು ಕೊಯ್ದು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಮರಳಿದರು.
ದೇವಸ್ಥಾನದಲ್ಲಿ ಕದಿರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಊರಿನ ಹಿರಿಯರಾದ ಮುದ್ದಿಯಡ ಚಾಮಿ ಸೋಮಯ್ಯ ಅವರು ಮಾತನಾಡಿ, ನಾಡಿನ ಸಮಸ್ತ ಜನತೆಗೆ ಪುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು.
ನಂತರ ಗ್ರಾಮಸ್ಥರೆಲ್ಲರೂ ಊರಿನ ಅಂಬಲದಲ್ಲಿ ಒಟ್ಟುಗೂಡಿ ಸಂಭ್ರಮ ಹಂಚಿಕೊಂಡರು. ಬಳಿಕ ತಮ್ಮ ತಮ್ಮ ಗದ್ದೆಗಳಿಗೆ ತೆರಳಿ ಕದಿರು ತೆಗೆದು ಪುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.
ಊರಿನವರು ಒಗ್ಗೂಡಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಕೃಷಿ ಸಂಸ್ಕೃತಿ, ಧಾರ್ಮಿಕ ಶ್ರದ್ಧೆ ಹಾಗೂ ಸಾಂಪ್ರದಾಯಿಕ ಪರಂಪರೆಯನ್ನು ಮುಂದುವರಿಸಿದರು.
ಈ ಸಂದರ್ಭ ಊರಿನ ತಕ್ಕ ಮುಖ್ಯಸ್ಥ ಮಲಚೀರ ಬೋಜಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಶಂಭು ಪೂವಯ್ಯ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಆಲೇಮಾಡ ನವೀನ್ ದೇವಯ್ಯ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.