Kodagu

ಒಂದು ಮನೆಗೆ ನೀರು ಕೊಡಲು ಇಡೀ ರಸ್ತೆಯನ್ನೇ ಅಗೆದ ನಗರಸಭೆ ಸಿಬ್ಬಂದಿ;ದಸರಾ ಸಂಭ್ರಮದ ನಡುವೆಯೇ ಬದಲಿ ರಸ್ತೆ ಮಾರ್ಗದಲ್ಲಿ ವಾಹನ ಸವಾರರಿಗೆ ಸಂಕಷ್ಟ

admincoorgdaily

ಒಂದು ಮನೆಗೆ ನೀರು ಕೊಡಲು ಇಡೀ ರಸ್ತೆಯನ್ನೇ ಅಗೆದ ನಗರಸಭೆ ಸಿಬ್ಬಂದಿ;ದಸರಾ ಸಂಭ್ರಮದ ನಡುವೆಯೇ ಬದಲಿ ರಸ್ತೆ ಮಾರ್ಗದಲ್ಲಿ ವಾಹನ ಸವಾರರಿಗೆ ಸಂಕಷ್ಟ
ಮಡಿಕೇರಿ:-ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದಸರಾ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ನಗರಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ನಗರದ ಮಲ್ಲಿಕಾರ್ಜುನ ನಗರ ರಸ್ತೆಯಲ್ಲಿ ನಗರಸಭೆಯ ಕಾರ್ಯವೈಖರಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಮನೆಗೆ ನೀರು ಸರಬರಾಜು ಆಗುತ್ತಿಲ್ಲ ಎಂಬ ಕಾರಣಕ್ಕೆ ಇಡೀ ರಸ್ತೆಯನ್ನೇ ಅಗೆದು ಹಾಳು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಕಿರಿದಾಗಿರುವ ರಸ್ತೆಯಲ್ಲಿ ಗುಂಡಿ ತೋಡಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಜನರ ಅನುಕೂಲಕ್ಕಾಗಿ ಕೆಲಸ ಮಾಡಬೇಕಾದ ನಗರಸಭೆಯ ಸಿಬ್ಬಂದಿಯೇ ಜನರಿಗೆ ತೊಂದರೆ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.


ಇದು ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ರಸ್ತೆ... ದಸರಾ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಬದಲಿ ರಸ್ತೆಯಲ್ಲಿ ಸಂಚರಿಸುವ ಪ್ರಮುಖ ಮಾರ್ಗವಾಗಿದೆ. ಅಬ್ಬಿ ಜಲಪಾತದ ಕಡೆಗೆ ತೆರಳುವ ಪ್ರವಾಸಿಗರೂ ಈ ಮಾರ್ಗವನ್ನು ಬಳಸುತ್ತಾರೆ. ಆದರೆ, ಇದೀಗ ಇದೇ ರಸ್ತೆಯಲ್ಲಿ ನಗರಸಭೆಯ ಕಾರ್ಯವೈಖರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಒಂದು ಮನೆಗೆ ನೀರು ಸರಬರಾಜು ಆಗುತ್ತಿಲ್ಲ ಎಂಬ ಕಾರಣಕ್ಕೆ ಇಡೀ ರಸ್ತೆಯನ್ನೇ ಅಗೆದು ಹಾಳು ಮಾಡಲಾಗಿದೆ ಉಮೇಶ್ ಎಂಬುವವರ ಮನೆಗೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ನಗರಸಭೆಯ ಸಿಬ್ಬಂದಿ ನಿರು ಸರಬರಾಜು ಮಾಡುವ ಖಾನ್ ಮತ್ತು ಸುಬ್ರಹ್ಮಣಿ ಎಂಬುವವರು ರಸ್ತೆಯನ್ನು ಅಗೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.‌ಕಳೆದ ಎರಡು-ಮೂರು ದಿನಗಳಿಂದ ನೀರಿನ ಪೈಪ್ ದುರಸ್ತಿಗಾಗಿ ರಸ್ತೆ ಅಗೆದು ಕಾಮಗಾರಿ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಈಗಾಗಲೇ ಕಿರಿದಾಗಿರುವ ರಸ್ತೆಯಲ್ಲಿ ಸಂಚಾರ ಮತ್ತಷ್ಟು ದುಸ್ತರವಾಗಿದೆ.
ಒಂದು ಮನೆಗೆ ನೀರು ಪೂರೈಸುವುದು ಅಗತ್ಯವೇ ಸರಿ. ಆದರೆ, ಆ ಕೆಲಸಕ್ಕಾಗಿ ಇಡೀ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸ್ಥಳೀಯರು ಮುಂದಿಟ್ಟಿದ್ದಾರೆ.

ಇನ್ನು, ದಸರಾ ಹಿನ್ನೆಲೆಯಲ್ಲಿ ಕೋದಂಡರಾಮ ದೇವಾಲಯದ ಬಳಿ ಮಂಟಪ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರ ಸಂಚಾರ ಹೆಚ್ಚಾಗುವ ಸಾಧ್ಯತೆಯಿದೆ. ಇಂತಹ ಹೊತ್ತಿನಲ್ಲಿ ರಸ್ತೆಯನ್ನು ಅಗೆದು ಬಿಟ್ಟಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು. ರಸ್ತೆ ಕಾಮಗಾರಿ ನಡೆಸುವಾಗ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ದುರಸ್ತಿಗೊಳಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಇಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇನ್ನು, ಸಮಸ್ಯೆ ಕುರಿತು ಪ್ರಶ್ನಿಸಿದರೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ, ಬದಲಿಗೆ ಉಡಾಫೆಯ ಉತ್ತರ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ದಸರಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ನಗರಸಭೆಯೇ ತೊಂದರೆ ಉಂಟುಮಾಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಬೇಕಿದೆ. ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಯುಕ್ತರು ತಕ್ಷಣ ಮಧ್ಯಪ್ರವೇಶಿಸಿ, ರಸ್ತೆಯನ್ನು ದುರಸ್ತಿಗೊಳಿಸುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.