ವಿರಾಜಪೇಟೆಯಲ್ಲಿ ಹೋಟೆಲ್, ಬೇಕರಿಗಳ ಮೇಲೆ ಪುರಸಭೆ ಹಠಾತ್ ದಾಳಿ: ಶುಚಿತ್ವವಿಲ್ಲದ, ಲೈಸೆನ್ಸ್ ಇಲ್ಲದ ಅಂಗಡಿಗಳಿಗೆ ದಂಡದ ಬಿಸಿ
admincoorgdaily

ವಿರಾಜಪೇಟೆ:ನಗರದ ಹೋಟೆಲ್ ಹಾಗೂ ಬೇಕರಿಗಳಲ್ಲಿ ಗ್ರಾಹಕರಿಗೆ ನಾಲಿಗೆ ಚಪ್ಪರಿಸುವ ತಿಂಡಿ-ತೀರ್ಥಗಳು ಸಿಗುತ್ತಿರಬಹುದು, ಆದರೆ ಅಲ್ಲಿನ ಶುಚಿತ್ವದ ಪರಿಸ್ಥಿತಿ ಹೇಗಿದೆ ಗೊತ್ತಾ? ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಎಚ್ಚೆತ್ತ ವಿರಾಜಪೇಟೆ ಪುರಸಭೆ ಅಧಿಕಾರಿಗಳು ನಗರದ ವಿವಿಧ ಹೋಟೆಲ್ ಮತ್ತು ಬೇಕರಿಗಳ ಮೇಲೆ ದಾಳಿ ನಡೆಸಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ
ಅಧಿಕಾರಿಗಳ ದಿಢೀರ್ ತಪಾಸಣೆ:
ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರವಂಡ ಕೆ. ನಾಚಪ್ಪ ಹಾಗೂ ಪರಿಸರ ಅಭಿಯಂತರರಾದ ರೀತು ಸಿಂಗ್ ಅವರ ನೇತೃತ್ವದಲ್ಲಿ ಪುರಸಭೆ ತಂಡವು ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆಯ ಹೋಟೆಲ್ ಹಾಗೂ ಬೇಕರಿಗಳಿಗೆ ಭೇಟಿ ನೀಡಿ ತೀವ್ರ ತಪಾಸಣೆ ನಡೆಸಿತು. ಅಡುಗೆ ಕೋಣೆಗಳ ಶುಚಿತ್ವ, ಗ್ರಾಹಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ನಿಷೇಧಿತ ಪ್ಲಾಸ್ಟಿಕ್ ಬಳಕೆ ಹಾಗೂ ಅಗತ್ಯ ವ್ಯಾಪಾರ ಪರವಾನಗಿ (ಲೈಸೆನ್ಸ್) ಇದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು.
ನಿಯಮ ಉಲ್ಲಂಘನೆಗೆ ಬಿಸಿ ಮುಟ್ಟುಸಿದ ಪುರಸಭೆ:
ಪರಿಶೀಲನೆ ವೇಳೆ ಕೆಲವು ಹೋಟೆಲ್ ಹಾಗೂ ಬೇಕರಿಗಳಲ್ಲಿ ಶುಚಿತ್ವದ ಗಂಭೀರ ಕೊರತೆ ಕಂಡುಬAದಿದ್ದು, ಅಗತ್ಯ ಪರವಾನಗಿಗಳಿಲ್ಲದೆ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಅಂತಹ ಮಳಿಗೆಗಳಿಗೆ ದಂಡ ವಿಧಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಕಡಾಖಂಡಿತವಾಗಿ ಎಚ್ಚರಿಕೆ ನೀಡಿದರು.
ಆರೋಗ್ಯವೇ ಭಾಗ್ಯ - ಅಧಿಕಾರಿಗಳ ಎಚ್ಚರಿಕೆ:
"ಆಹಾರ ತಯಾರಿಸಿ ಮಾರಾಟ ಮಾಡುವ ಪ್ರತಿಯೊಂದು ಸಂಸ್ಥೆಯೂ ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು. ಕಡ್ಡಾಯವಾಗಿ ಶುಚಿತ್ವ ಕಾಪಾಡಬೇಕು, ಪರಿಸರಕ್ಕೆ ಮಾರಕವಾದ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಮಾನ್ಯತೆ ಪಡೆದ ಪರವಾನಗಿಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕು ಎಂದು ಪುರಸಭೆ ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.
ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರವಂಡ ಕೆ. ನಾಚಪ್ಪ ಅವರು, ಗ್ರಾಹಕರ ಆರೋಗ್ಯವೇ ನಮ್ಮ ಪ್ರಥಮ ಪ್ರಾಶಸ್ತ್ಯ. ಆಹಾರ ತಯಾರಿಸಿ ಮಾರಾಟ ಮಾಡುವ ಪ್ರತಿಯೊಂದು ಸಂಸ್ಥೆಯೂ ಸಾರ್ವಜನಿಕರ ಹಾಗೂ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಅಡುಗೆ ಕೋಣೆ ಮತ್ತು ಪರಿಸರದಲ್ಲಿ ಅತ್ಯುನ್ನತ ಮಟ್ಟದ ಶುಚಿತ್ವ ಕಾಪಾಡಬೇಕು. ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ಕಾರಣಕ್ಕೂ ಚೆಲ್ಲಾಟವಾಡಲು ಬಿಡುವುದಿಲ್ಲ. ವ್ಯಾಪಾರ ಮಾಡುವ ಪ್ರತಿಯೊಬ್ಬರೂ ಪುರಸಭೆಯಿಂದ ಅಗತ್ಯವಿರುವ ಮಾನ್ಯತೆ ಪಡೆದ ಪರವಾನಗಿಗಳನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಅಥವಾ ಶುಚಿತ್ವವಿಲ್ಲದೆ ವ್ಯಾಪಾರ ನಡೆಸುವವರ ವಿರುದ್ಧ ಮುನ್ಸೂಚನೆ ಇಲ್ಲದೆ ಕಠಿಣ ಕ್ರಮ ಹಾಗೂ ದಂಡದ ಬಿಸಿ ಮುಟ್ಟಿಸಲಾಗುವುದು ಎಂದರು.
ಪರಿಸರ ಅಭಿಯಂತರರಾದ ರೀತು ಸಿಂಗ್ ಮಾತನಾಡಿ"ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ನಮ್ಮ ಗುರಿ. ಹೋಟೆಲ್ ಮತ್ತು ಬೇಕರಿಗಳಲ್ಲಿ ಪ್ಲಾಸ್ಟಿಕ್ ಕವರ್ ಹಾಗೂ ಪಾಲಿಥೀನ್ ಬಳಕೆ ಮಾಡುವುದನ್ನು ಕಡಾಖಂಡಿತವಾಗಿ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು. ಹೋಟೆಲ್ ಮತ್ತು ಬೇಕರಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡದಿದ್ದರೆ ಪರಿಸರ ಮಾಲಿನ್ಯ ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ವ್ಯಾಪಾರಿಯೂ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಈ ಕಾರ್ಯಾಚರಣೆಯಲ್ಲಿ ಪುರಸಭಾ ಸಿಬ್ಬಂದಿಗಳಾದ ಕೋಮಲ, ವೇಲುಮುರುಗನ್ ಹಾಗೂ ಇತರ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪುರಸಭೆಯ ಈ ದಿಢೀರ್ ಕಾರ್ಯಾಚರಣೆಯು ನಗರದ ಇತರೆ ಹೋಟೆಲ್ ಮತ್ತು ಬೇಕರಿ ಮಾಲೀಕರಲ್ಲಿ ನಡುಕ ಹುಟ್ಟಿಸಿದೆ.