ಸಂಗೀತ ಸಮಾಜವನ್ನು ಕಟ್ಟುವ ಶಕ್ತಿ: 'ವಾಯ್ಸ್ ಆಫ್ ವಿರಾಜ್‌ಪೇಟೆ-2026' ಕಾರ್ಯಕ್ರಮದಲ್ಲಿ ಸಂಕೇತ್ ಪೂವಯ್ಯ ಬಣ್ಣನೆ
admincoorgdaily

ವಿರಾಜಪೇಟೆ:"ಮಕ್ಕಳಲ್ಲಿ ಪ್ರಕೃತಿ, ಸಂಸ್ಕೃತಿ ಮತ್ತು ಸಮಾಜವನ್ನು ಕಟ್ಟುವ ಶಕ್ತಿಯನ್ನು ತುಂಬುವಲ್ಲಿ ಸಂಗೀತದ ಪಾತ್ರ ಹಿರಿದು. ಸರಸ್ವತಿ ಒಲಿದರೆ ಸಾಮ್ರಾಜ್ಯ ಒಲಿದಂತೆ. ಕೇವಲ ಹಣ ಗಳಿಸುವ ವಿದ್ಯೆಯಲ್ಲದೆ, ಮಕ್ಕಳಿಗೆ ಸಂಸ್ಕೃತಿ-ಕಲೆಗಳನ್ನು ಧಾರೆ ಎರೆಯುತ್ತಿರುವ ಪೋಷಕರ ಆಲೋಚನಾ ಲಹರಿ ಅಭಿನಂದನಾರ್ಹ"ಎಂದು ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯರೂ, ಹಿರಿಯ ವಕೀಲರೂ ಆದ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಹಾಗೂ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ವಾಯ್ಸ್ ಆಫ್ ವಿರಾಜ್‌ಪೇಟೆ-2026'ಸಂಗೀತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಸಂಕೇತ್ ಪೂವಯ್ಯ, ಅವರು ದಿವಂಗತ ವೆಂಕಟೇಶ್ ಕಾಮತ್‌ರ ಸೇವೆಯ ಸ್ಮರಣೆ ಮಾಡಿ,"ದಿವಂಗತ ವೆಂಕಟೇಶ್ ಕಾಮತ್ ಅವರು ಕೇವಲ ವೃತ್ತಿಯಲ್ಲಷ್ಟೇ ಅಲ್ಲದೆ, ವೃತ್ತಿಯ ಹೊರತಾಗಿಯೂ ಉತ್ತಮ ಸಮಾಜ ನಿರ್ಮಾಣ ಮಾಡಲು ಅಪಾರ ಕೊಡುಗೆ ನೀಡಿದ್ದಾರೆ. ಅವರಲ್ಲಿದ್ದ ವಿಶೇಷ ಗುಣವೆಂದರೆ, ಯಾರಲ್ಲೇ ಪ್ರತಿಭೆ ಇದ್ದರೂ ಅದನ್ನು ಗುರುತಿಸಿ, ಬೆನ್ನು ತಟ್ಟಿ ವೇದಿಕೆ ಕಲ್ಪಿಸಿಕೊಡುತ್ತಿದ್ದುದು. 2000ನೇ ಇಸವಿಯಲ್ಲಿ ಅವರನ್ನು ಕಳೆದುಕೊಂಡಾಗ ಇಡೀ ವಿರಾಜಪೇಟೆ ಹಾಗೂ ಕೊಡಗು ಜಿಲ್ಲೆಯೇ ಶೋಕದಲ್ಲಿತ್ತು. ಅವರು ಇಡೀ ಮನುಕುಲದ ಆಸ್ತಿಯಾಗಿದ್ದರು. ಅವರ ನೆನಪಿನಲ್ಲಿ ಇಂದಿಗೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.
11 ದಿನಗಳ ಕಾಲ ನಡೆಯುವ ಈ ಸುದೀರ್ಘ ಕಾರ್ಯಕ್ರಮವನ್ನು ಸಂಘಟಿಸುವುದು ಇಲ್ಲಿನ ಸದಸ್ಯರು ತಮ್ಮ ಸ್ವಂತ ಹಣ, ಸಮಯ ಮತ್ತು ವೃತ್ತಿಯನ್ನು ಬದಿಗಿಟ್ಟು ಕಳೆದ ಹಲವಾರು ದಶಕಗಳಿಂದ ಈ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ"ಎಂದು ಅವರ ನಿಸ್ವಾರ್ಥ ಸೇವೆಯನ್ನು ಪೂವಯ್ಯ ಮುಕ್ತಕಂಠದಿಂದ ಶ್ಲಾಘಿಸಿದರು.
"ನೂರು ಭಾಷಣಗಳು ಮಾಡಲಾರದ ಜಾಗೃತಿಯನ್ನು ಒಂದು ಅರ್ಥಪೂರ್ಣ ಹಾಡು ಮಾಡಬಲ್ಲದು. ಇತಿಹಾಸ, ಹೋರಾಟದ ಹಿನ್ನೆಲೆ ಹಾಗೂ ಸಮಾಜದ ಬಾಂಧವ್ಯವನ್ನು ಬೆಳೆಸುವ ಶಕ್ತಿ ಸಂಗೀತಕ್ಕಿದೆ. ಇಲ್ಲಿ ಪುಟ್ಟ ಮಕ್ಕಳಿಂದ ಹಿಡಿದು 75 ವರ್ಷದ ಹಿರಿಯ ನಾಗರಿಕರಾದ ಶಾಂತಮ್ಮ ಆಚಾರ್ಯ ಅವರವರೆಗೂ ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂಗೀತದ ಮಹತ್ವಕ್ಕೆ ಸಾಕ್ಷಿ"ಎಂದರು.
"ಕೊಡಗಿನಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷದ ನಡುವೆ ವಾಸಿಸುತ್ತಿರುವ ಸುಮಾರು 20-21 ಮೂಲನಿವಾಸಿ ಬುಡಕಟ್ಟು ಸಮುದಾಯಗಳಿವೆ.
ಉದಾಹರಣೆಗೆ ಕುಟ್ಟದ ನಾಣಚ್ಚಿ ಹಾಡಿಯ ಕಥೆಯ ಹಾಡುಗಳಲ್ಲಿ ಆ ಜನಸಮುದಾಯದ ನೋವು-ನಲಿವು, ಪ್ರಕೃತಿ ಮತ್ತು ವನ್ಯಜೀವಿಗಳ ಮಹತ್ವ, ಅವರ ಶ್ರೇಷ್ಠ ಇತಿಹಾಸ ಅಡಗಿದೆ. ವಿರಾಜಪೇಟೆ ಒಂದರಲ್ಲೇ ಇಂತಹ 13 ವಿವಿಧ ಸಂಸ್ಕೃತಿಯ ಹಾಡುಗಳಿವೆ. ನಗರ ಪ್ರದೇಶ ತಲುಪದ ಈ ಬುಡಕಟ್ಟು ಮಕ್ಕಳ ವಿಶಿಷ್ಟ ಪ್ರತಿಭೆಗೆ 'ವಾಯ್ಸ್ ಆಫ್ ವಿರಾಜ್‌ಪೇಟೆ' ಮುಂದಿನ ದಿನಗಳಲ್ಲಿ ಉತ್ತಮ ವೇದಿಕೆಯಾಗಬೇಕು. ಅವರ ಸಂಸ್ಕೃತಿ ರಾಜ್ಯ, ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ಬಿಂಬಿತವಾಗುವಂತಾಗಬೇಕು"ಎಂದು ಸಮಿತಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಪುರಸಭೆಯ ಮಾಜಿ ಸದಸ್ಯರಾದ ಎಸ್.ಎಚ್. ಮತಿನ್ ಮಾತನಾಡಿ, ನಾಡಿನಲ್ಲಿ ಗೌರಿ ಗಣೇಶೋತ್ಸವ ಎಲ್ಲರ ಸಹಕಾರದಿಂದ ವಿಜೃಂಬಂಣೆಯಿಂದ ನಡೆಯುತ್ತಿದೆ. ಮುಂದೆಯೂ ಇದೇ ರೀತಿ ಯಶಸ್ವಿಯಾಗಿ ನಡೆಯಲೆಂದು ಹಾರೈಸಿದರು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರೂ, ಹಿರಿಯ ವಕೀಲರಾದ ರವೀಂದ್ರನಾಥ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರವಾದ ಕಲೆ ಹಾಗೂ ಸಂಗೀತ ಪ್ರತಿಭೆ ಅಡಗಿದೆ. ಆದರೆ ಅವರಿಗೆ ಸೂಕ್ತ ಅವಕಾಶ ಮತ್ತು ವೇದಿಕೆ ಸಿಗುವುದು ಕಷ್ಟ. ಇಂತಹ ಉದಯೋನ್ಮುಖ ಕಲಾವಿದರ ಪ್ರತಿಭೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ವತಿಯಿಂದ 'ವಾಯ್ಸ್ ಆಫ್ ವಿರಾಜ್‌ಪೇಟೆ'ಎಂಬ ಅರ್ಥಪೂರ್ಣ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ದಿವಂಗತ ವೆಂಕಟೇಶ್ ಕಾಮತ್ ಅವರ ಆದರ್ಶಗಳನ್ನು ಸ್ಮರಿಸಿದ ಅವರು, "ದಿವಂಗತ ವೆಂಕಟೇಶ್ ಕಾಮತ್ ಅವರು ಕಲೆ, ಸಾಹಿತ್ಯ ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಅವರ ತತ್ವಗಳು ಹಾಗೂ ಆಶಯಗಳ ಹಾದಿಯಲ್ಲೇ ನಮ್ಮ ಟ್ರಸ್ಟ್ ಮತ್ತು ದೇವಸ್ಥಾನ ಸಮಿತಿಯು ಸಾಗುತ್ತಿದ್ದು, ಗ್ರಾಮೀಣ ಮಕ್ಕಳ ಕಲಾ ಕುಸುಮಗಳನ್ನು ಸಮಾಜಕ್ಕೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
"ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಪ್ರಶಸ್ತಿಗಿಂತಲೂ ಹೆಚ್ಚಾಗಿ ಇಂತಹ ಬೃಹತ್ ವೇದಿಕೆಯಲ್ಲಿ ನಿಂತು ತಮ್ಮ ಕಲಾಪ್ರದರ್ಶನ ನೀಡುವುದು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೇವಲ ಹಣ ಗಳಿಸುವ ವಿದ್ಯೆಯಷ್ಟೇ ಅಲ್ಲದೆ, ಮಕ್ಕಳಿಗೆ ಸಂಗೀತ ಮತ್ತು ಸಂಸ್ಕಾರವನ್ನು ಧಾರೆ ಎರೆಯುತ್ತಿರುವ ಪೋಷಕರ ಪಾತ್ರ ಶ್ಲಾಘನೀಯ. ಸಂಗೀತ ಅಭ್ಯಾಸವು ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸುತ್ತದೆ"ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಜೆ.ಎನ್. ಸಂಪತ್ ಕುಮಾರ್, ಡಾ. ವೀರೇಂದ್ರ ಕಾಮತ್, ವಕೀಲ ನರೇಂದ್ರ ಕಾಮತ್, ಪದಾಧಿಕಾರಿಗಳಾದ ಸಂಪತ್ ಜೈನ್, ಪುರುಷೋತ್ತಮ್, ಮಹೇಂದ್ರ ಜೈನ್, ಅರುಣ್ ಕುಮಾರ್, ಅರುಣ್ ಜೈನ್, ಅಂಬಿ ಕೃಷ್ಣಮೂರ್ತಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಬಾರಿಯ'ವಾಯ್ಸ್ ಆಫ್ ವಿರಾಜ್‌ಪೇಟೆ'ಸ್ಪರ್ಧೆಯ ತೀರ್ಪುಗಾರರಾಗಿ ಮೈಸೂರಿನ ಖ್ಯಾತ ಗಾಯಕರಾದ ರಾಜೇಶ್ ಪಡಿಯಾರ್ ಹಾಗೂ ಬೆಳ್ತಂಗಡಿಯ ಬಿ. ಪ್ರಶಾಂತ್ ಬಾಳಿಗಾ ಅವರು ನಡೆಸಿಕೊಟ್ಟರು. ಸ್ಪರ್ಧೆಗೆ ಶಿವಮೊಗ್ಗದ'ಹೆಚ್.ಎಮ್.ಟಿ. ಎಂಟರ್‌ಪ್ರೈಸಸ್'ನ ಜಿ.ಕೆ. ದಿನೇಶ್ ಮತ್ತು ತಂಡದವರು ಮನಮೋಹಕ ಹಿನ್ನೆಲೆ ಸಂಗೀತ ಒದಗಿಸಿದರು.
ಕಾರ್ಯಕ್ರಮದಲ್ಲಿ ಸ್ಫರ್ಧಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.