Kodagu

ನಾಪೋಕ್ಲು;ರೂಢಿಗತ ಕಳ್ಳನಿಗೆ ಗೂಂಡಾ ಕಾಯ್ದೆ: ಬಳ್ಳಾರಿ ಜೈಲಿಗೆ ರವಾನೆ

admincoorgdaily

ಸಾಂದರ್ಭಿಕ ಚಿತ್ರ
ಮಡಿಕೇರಿ; ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿಯಾದ  ಕುಡಿಯರ ಅಶೋಕ, (36)  ಈತನು 2014 ನೇ ಸಾಲಿನಿಂದ ವಿವಿಧ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾದ ಕನ್ನ ಕಳವು ಹಾಗೂ ಸಾಮಾನ್ಯ ಕಳವು ಅಪರಾಧಗಳಲ್ಲಿ ಭಾಗಿಯಾಗಿದ್ದು, ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳು ಘನ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತವೆ ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಸದರಿ ಆರೋಪಿಯ ವಿರುದ್ಧ 2026 ನೇ ಸಾಲಿನಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ: 84/2026 ಕಲಂ: 331(3), 331(4), 305(ಎ) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾರೆ.

ಸದರಿ ಆರೋಪಿಯು ರೂಢಿಗತ ಅಪರಾಧಿಯಾಗಿದ್ದು, ಜಾಮೀನು ಪಡೆದು ಹೊರ ಬಂದ ನಂತರ ಪುನಃ ಅಕ್ರಮವಾಗಿ ಚಟುವಟಿಕೆಗಳು ಮತ್ತು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಳ್ಳಭಟ್ಟಿ ಸಾರಾಯಿ ವ್ಯವಹಾರಗಳ, ಮಾದಕ ವಸ್ತು ಅಪರಾಧಿಗಳು ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಮತ್ತು ವಿಡಿಯೋ ಅಥವಾ ಆಡಿಯೋ ಪೈರೇಟ್ಸ್ ಅಧಿನಿಯಮ 1985 (1985 ರ ಕರ್ನಾಟಕ ಅಧಿನಿಯಮ 12) ರ ಕಲಂ: 03 ಉಪಕಲಂ: (1) ಮತ್ತು (2) ರ ಅಡಿಯಲ್ಲಿ ಮಾನ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು, ಕೊಡಗು ಜಿಲ್ಲೆ, ಮಡಿಕೇರಿ ರವರು ದಿನಾಂಕ: 02-11-2026 ರಂದು ಆರೋಪಿ ಕುಡಿಯರ ಅಶೋಕ,  ಈತನನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡುವಂತೆ ಆದೇಶಿಸಲಾಗಿರುತ್ತದೆ.
 ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು, ಕೊಡಗು ಜಿಲ್ಲೆ, ಮಡಿಕೇರಿ ರವರ ಬಂಧನದ ಆದೇಶದ ಅನ್ವಯ ಆರೋಪಿ  ಕುಡಿಯರ ಅಶೋಕ,  ಈತನನ್ನು ದಿನಾಂಕ: 03-11-2026 ರಂದು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಪೊಲೀಸ್ ಅಧೀಕ್ಷಕರಾದ ಎಸ್.ಬಿಂದುಮಣಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.