ನಾಪೋಕ್ಲು ಕೊಡವ ಸಮಾಜ ಚಾಂಪಿಯನ್ - ಬಾಳೆಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ಯಶಸ್ವಿ
admincoorgdaily


ಪೊನ್ನಂಪೇಟೆ,ನ 11: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಅಂತರ್ ಕೊಡವ ಸಮಾಜಗಳ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ನಾಪೋಕ್ಲು ಕೊಡವ ಸಮಾಜ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾಳೆಲೆ ಕೊಡವ ಸಮಾಜ (ಎ) ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಮಂಗಳವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ನಾಪೋಕ್ಲು ತಂಡ 38 ರನ್ಗಳ ಅಂತರದಿಂದ ಬಾಳೆಲೆ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ನಾಪೋಕ್ಲು ತಂಡ ಐದು ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ತಂಡದ ಮಣವಟ್ಟೀರ ರಿಶವ್ 51 ಹಾಗೂ ನೆರವಂಡ ವರುಣ್ 20 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಬಾಳೆಲೆ ತಂಡ 75 ರನ್ಗಳಿಗೆ ಸರ್ವಪತನ ಕಂಡಿತು. ಬಾಳೆಲೆ ಪರ ಅಜ್ಜಿನಿಕಂಡ ಕುಟ್ಟಪ್ಪ 14 ಹಾಗೂ ಮಂಡಂಗಡ ಮಂದಣ್ಣ 11 ರನ್ ಗಳಿಸಿದರು.
ನಾಪೋಕ್ಲು ತಂಡದ ನೆರವಂಡ ಪ್ರವೀಣ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ನೆರವಂಡ ಪ್ರಶಾಂತ್ ಹಾಗೂ ಪೆಬ್ಬಟ್ಟೀರ ಯತಿಶ್ ತಲಾ ಎರಡು ವಿಕೆಟ್ ಕಬಳಿಸಿದರು. ವಿಜೇತ ತಂಡದ ನೆರವಂಡ ಪ್ರವೀಣ್ ಹಾಗೂ ಸೋತ ತಂಡದ ಸಣ್ಣುವಂಡ ಶಯನ್ ಅಯ್ಯಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸೆಮಿಫೈನಲ್ನಲ್ಲಿ ನಾಪೋಕ್ಲು, ಬಾಳೆಲೆ ತಂಡಗಳಿಗೆ ಜಯ
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಾಪೋಕ್ಲು ಕೊಡವ ಸಮಾಜ ತಂಡ ಹುದಿಕೇರಿ ಕೊಡವ ಸಮಾಜ ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಡಿದ ಹುದಿಕೇರಿ ತಂಡ ಮೂರು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನಾಪೋಕ್ಲು ತಂಡ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ನಾಪೋಕ್ಲು ತಂಡದ ಮಣವಟ್ಟೀರ ರಿಶವ್ 52 ರನ್ ಗಳಿಸಿದರು. ಬೊಳ್ಳೇರ ದಿಶಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಳೆಲೆ (ಎ) ತಂಡ ಮೂರ್ನಾಡು ಕೊಡವ ಸಮಾಜವನ್ನು ಒಂದು ವಿಕೆಟ್ನಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಮೂರ್ನಾಡು ತಂಡ ಆರು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಳೆಲೆ ತಂಡ ಒಂಬತ್ತು ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು. ಕರ್ತಮಾಡ ಗಣಪತಿ ನಾಲ್ಕು ವಿಕೆಟ್ ಪಡೆದರೆ, ಪಾಸುರ ಕಿಶೋರ್, ಹಂಚೇಟಿರ ಸೋಮಣ್ಣ ಹಾಗೂ ಸಣ್ಣುವಂಡ ಶಯನ್ ತಲಾ ಎರಡು ವಿಕೆಟ್ ಕಬಳಿಸಿದರು. ಸಣ್ಣುವಂಡ ಶಯನ್ ಕೇವಲ ಒಂಬತ್ತು ಎಸೆತಗಳಲ್ಲಿ 28 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಯುವ ಆಟಗಾರರಿಗೆ ಪ್ರೋತ್ಸಾಹದ ಭರವಸೆ
ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್ ಮಾತನಾಡಿ, ಲೆದರ್ ಬಾಲ್ ಕ್ರಿಕೆಟ್ ಯುವ ಪ್ರತಿಭೆಗಳು ಭವಿಷ್ಯದ ಉತ್ತಮ ಆಟಗಾರರಾಗಿ ಬೆಳೆಯಲು ಸೂಕ್ತ ವೇದಿಕೆಯಾಗಿದೆ. ಅಕಾಡೆಮಿ ವತಿಯಿಂದ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ವೃತ್ತಿಪರ ಕ್ರಿಕೆಟಿಗರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ಅವಕಾಶ ಪಡೆಯಲು ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಟೂರ್ನಿಯಲ್ಲಿ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದು ಸಂತಸದ ವಿಚಾರ ಎಂದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಲೆದರ್ ಬಾಲ್ ಕ್ರಿಕೆಟ್ ಟೂರ್ನಿ ವರ್ಷದಿಂದ ವರ್ಷಕ್ಕೆ ಯಶಸ್ಸು ಕಾಣುತ್ತಿರುವುದು ಶ್ಲಾಘನೀಯ. ಯುವ ಆಟಗಾರರ ಪ್ರತಿಭೆ ಬೆಳೆಯಲು ನಿರಂತರ ಪ್ರೋತ್ಸಾಹ ಅಗತ್ಯ ಎಂದರು.
ವಿಜಯಲಕ್ಷ್ಮಿ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಮೈದಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮುಂದಿನ ಕೊಡವ ಕ್ರಿಕೆಟ್ ನಮ್ಮೆಗೆ ಸರ್ಕಾರದಿಂದ ಪ್ರೋತ್ಸಾಹ ದೊರೆಯುವಂತಾಗಬೇಕು. ರಾಜ್ಯ ಕ್ರೀಡಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಇಲ್ಲಿನ ವಿಶಾಲ ಮೈದಾನ ಕ್ರಿಕೆಟ್ ಪಂದ್ಯಾಟಕ್ಕೆ ಉತ್ತಮ ಸೌಲಭ್ಯ ಹೊಂದಿದೆ ಎಂದರು.
ಯುವ ಆಟಗಾರ್ತಿಗೆ ಸನ್ಮಾನ
15 ವರ್ಷ ವಯೋಮಿತಿಯ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರ್ತಿ ಓಡಿಯಂಡ ರೋಹಿಣಿ ದೇಚಮ್ಮ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎನ್ಸಿಎ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರ ಸಾಧನೆಯನ್ನು ಗಣ್ಯರು ಶ್ಲಾಘಿಸಿದರು.
ಟೂರ್ನಿಯ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್ ಕಾರ್ಯನಿರ್ವಹಿಸಿದರು. ಆದೇಂಗಡ ಶಾಶ್ವತ್, ಚೆಕ್ಕೇರ ನವೀನ್, ಅಡ್ಡೇಂಗಡ ಶೌರ್ಯ, ಅಳಮೇಂಗಡ ಮೋಹನ್, ಮಾಚಂಗಡ ಸೋಮಣ್ಣ, ಕೊಕ್ಕೇಂಗಡ ರಂಜನ್ ಹಾಗೂ ಕೊಟ್ಟಂಗಡ ಸೂರಜ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಕಾಂಡೇರ ದಾನಾ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.
ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಕಾರ್ಯದರ್ಶಿ ಕೊಟ್ಟಂಗಡ ಸೂರಜ್ ಮಾದಪ್ಪ, ನಿರ್ದೇಶಕರಾದ ಕೀತಿಯಂಡ ವಿವೇಕ್, ಮಾಚಂಗಡ ದರ್ಶನ್ ಸೋಮಣ್ಣ, ಬಾಳೆಯಡ ಪ್ರತಿಶ್ ಪೂವಯ್ಯ, ಚೆಕ್ಕೇರ ಚಂದ್ರಪ್ರಕಾಶ್, ಚೌರೀರ ಶರತ್ ಹಾಗೂ ಅವರೆಮಾದಂಡ ಶರಣ್ ಪೂಣಚ್ಚ ಉಪಸ್ಥಿತರಿದ್ದರು.