ನಾಪೋಕ್ಲು :ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿನಿಯರಿಗೆ ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಗೌರವ
admincoorgdaily

ನಾಪೋಕ್ಲು :ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಕೂರ್ಗ್ ಓಲ್ಡ್ ಸ್ಟುಡೆಂಟ್ಸ್ ಅಸೋಸಿಯೇಷನ್ ಯುಎಇ ವತಿಯಿಂದ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ಕೊಡಗಿನ ನಾಲ್ಕುನಾಡು ಭಾಗದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಮೆರಿಕದಲ್ಲಿ ವೈದ್ಯಕೀಯ ವ್ಯಾಸಂಗ ಪೂರ್ಣಗೊಳಿಸಿ ಪ್ರಸ್ತುತ ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕುಂಜಿಲ ಗ್ರಾಮದ ಎಂ.ಎ. ಶೌಕತ್ ಅಲಿ ಅವರ ಪುತ್ರಿ ಡಾ.ಆಯಿಷಾ ಶೌಕತ್ತಲಿ ಹಾಗೂ ಕನ್ನಡ ಮಾಧ್ಯಮದ ಶಾಲೆಯಲ್ಲಿ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಎಮ್ಮೆಮಾಡು ಕೂರುಳಿ ಗ್ರಾಮದ ಪಿ.ಎ. ಮಹಮೂದ್ ಅವರ ಪುತ್ರಿ ಪಿ.ಎಂ.ಫಾಸಿಲ ಅವರನ್ನು ಸನ್ಮಾನಿಸಲಾಯಿತು.
ಇಬ್ಬರು ಕೂಡ ರಾಫೆಲ್ಸ್ ಕಾಲೇಜಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಪೂರೈಸಿದ್ದರು.
ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಶಾಲಾ-ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಫಾಸಿಲ ಮಹಮೂದ್ ಅವರ ಮುಂದಿನ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಸಂಘದ ವತಿಯಿಂದ ರೂ.20,ಸಾವಿರ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಫೆಲ್ಸ್ ಕಾಲೇಜಿನ ಪ್ರಾಂಶುಪಾಲರಾದ ಕಲಾ ಮುತ್ತಮ್ಮ,ನಾಪೋಕ್ಲು ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಫ್ರಾನ್ಸಿಸ್, ಸಿಬ್ಬಂದಿ ಆನಂದ್,ಬಲ್ಲಮಾವಟಿ ಶಾಲೆಯ ಹಿರಿಯ ಉಪನ್ಯಾಸಕ ಮೆಹಬೂಬ್ ಸಾಬ್ ಹಾಗೂ ಕೊಡಗು ಹಳೇ ವಿದ್ಯಾರ್ಥಿಗಳ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡಂಡ ಕುಂಜಿಲ ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ಬೆಂಬಲ ನೀಡಿದ ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ವರದಿ :ಝಕರಿಯ ನಾಪೋಕ್ಲು