ಅರಮೇರಿ ಎಸ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ ಗಾಂಧಿ ಮತ್ತು ಶಾಸ್ತ್ರಿ ಜಯಂತಿ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ
admincoorgdaily

ವಿರಾಜಪೇಟೆ:ರಾಷ್ಟ್ರಪಿ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನದ ಅಂಗವಾಗಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೊಡಗು ಜಿಲ್ಲೆ ಇವರ ವತಿಯಿಂದ ವಿರಾಜಪೇಟೆ ಸಮೀಪದ ಅರಮೇರಿಯ ಎಸ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ ಮಾದಕ ವಸ್ತುಗಳ ವಿರುದ್ಧ ರಾಷ್ಟ್ರೀಯ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು.
ರಾಜಯೋಗಿನಿ ಬಿಕೆ ಧನಲಕ್ಷ್ಮಿ ಅವರ ಮಾರ್ಗದರ್ಶನ ಹಾಗೂ
ಕಾರ್ಯಕ್ರಮವನ್ನು ನಡೆಸಿಕೊಟ್ಟು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಡಿಕೇರಿಯ ರಾಜಯೋಗಿನಿ ಬಿ.ಕೆ ಧನಲಕ್ಷ್ಮಿ ಅವರು, "ಇಂದಿನ ಯುವ ಪೀಳಿಗೆಯು ದೇಶದ ನಿಜವಾದ ಸಂಪತ್ತು. ಆದರೆ ದುಃಖದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕ್ಷಣಿಕ ಆಕರ್ಷಣೆ ಹಾಗೂ ವ್ಯಸನಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಆರೋಗ್ಯ ಮತ್ತು ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯು ಕೇವಲ ವ್ಯಕ್ತಿಯೊಬ್ಬರ ಆರೋಗ್ಯವನ್ನು ಮಾತ್ರವಲ್ಲದೆ, ಇಡೀ ಕುಟುಂಬ ಮತ್ತು ಸಮಾಜವನ್ನೇ ಅಧೋಗತಿಗೆ ಕೊಂಡೊಯ್ಯತ್ತದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ರಾಜಯೋಗ ಧ್ಯಾನ ಅತ್ಯಂತ ಸಹಕಾರಿ. ಏಕಾಗ್ರತೆ ಮತ್ತು ಧನಾತ್ಮಕ ಆಲೋಚನೆಗಳಿಂದ ಯಾವುದೇ ದುಶ್ಚಟಗಳಿಂದ ದೂರವಿರಬಹುದು ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡುತ್ತಾ, ಇಂದಿನ ಯುವ ಸಮೂಹವು ಯಾವುದೇ ರೀತಿಯ ಮಾದಕ ವಸ್ತುಗಳ ವ್ಯಸನಕ್ಕೆ ಒಳಪಡುವುದಿಲ್ಲವೆಂದು ದೃಢ ಸಂಕಲ್ಪ ಮಾಡಬೇಕು ಎಂದು ತಿಳಿಸಿ, ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮಾದಕ ವ್ಯಸನದ ವಿರುದ್ಧ ಕಠಿಣ ಪ್ರತಿಜ್ಞೆಯನ್ನು ಬೋಧಿಸಿ ವಿಶೇಷ ರಾಜಯೋಗ ಧ್ಯಾನದ ಅಭ್ಯಾಸವನ್ನು ಮಾಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ವಿರಾಜಪೇಟೆ ಸಂಚಾಲಕರಾದ ಕೋಮಲ ಅವರು, "ವಿದ್ಯಾರ್ಥಿ ದೆಸೆಯು ಜೀವನದ ಅತಿ ಮುಖ್ಯವಾದ ಘಟ್ಟವಾಗಿದೆ. ಈ ಹಂತದಲ್ಲಿ ಒಳ್ಳೆಯ ಸಂಸ್ಕಾರ, ಸತ್ಚಿಂತನೆ ಮತ್ತು ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ದುಷ್ಟ ಹವ್ಯಾಸಗಳಿಗೆ ಅವಕಾಶ ನೀಡದೆ, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ವನ್ನು ಕಾಪಾಡಿಕೊಳ್ಳುವ ಮೂಲಕ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಎಂಎಸ್ ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ ಅವರು, "ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಬ್ರಹ್ಮಕುಮಾರಿ ಸಂಸ್ಥೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ. ಇದು ಮಕ್ಕಳ ಭವಿಷ್ಯಕ್ಕೆ ದಾರಿದೀಪ ಎಂದು ಅಭಿಪ್ರಾಯಪಟ್ಟರು.
ಈ ಜಾಗೃತಿ ಆಂದೋಲನದಲ್ಲಿ ಶಾಲೆಯ ಎನ್‌ಸಿಸಿ ಹಾಗೂ ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಹಾಜರಿದ್ದರು.