ರಾಷ್ಟ್ರೀಯ ರಕ್ತದಾನ ದಿನಾಚರಣೆ
admincoorgdaily

ಮಡಿಕೇರಿ:-ಕೊಡಗು ಜಿಲ್ಲೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಹಾಗೂ ರಕ್ತದ ಅವಶ್ಯಕತೆ ಪೂರೈಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕೊಡಗು ಇವರ ಸಹಯೋಗದಲ್ಲಿ ಮಂಗಳವಾರ ರಾಷ್ಠ್ರೀಯ ರಕ್ತದಾನ ದಿನಾಚರಣೆ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರವೀಂದ್ರ ರೈ ಅವರು ಉದ್ಘಾಟಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನದ ಮಹತ್ವ ಅರಿತು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. ಜಿಲ್ಲೆಯಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಡಾ.ಕರುಂಬಯ್ಯ ಅವರು ಮಾತನಾಡಿ ರಕ್ತದಾನವು ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು, ಜಿಲ್ಲೆಯಲ್ಲಿನ ವಿವಿಧ ಸಂದರ್ಭಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಿರುವುದರಿಂದ ಅಗತ್ಯ ಪ್ರಮಾಣದ ರಕ್ತದ ಘಟಕಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರುವಂತೆ ಪ್ರೇರೇಪಿಸಬೇಕು ಎಂದು ಅವರು ಕರೆ ನೀಡಿದರು.
ರವೀಂದ್ರ ರೈ ಅವರು ಮಾತನಾಡಿ, ಕಾಲೇಜುಗಳಲ್ಲಿ ಯೂತ್ ರೆಡ್‍ಕ್ರಾಸ್ ಘಟಕಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಯುವಜನರಲ್ಲಿ ರಕ್ತದಾನದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಯುವಕರು ಸ್ವಯಂ ಪ್ರೇರಿತ ರಕ್ತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಮೂಲಕ “ರಕ್ತದಾನ – ಮಹಾದಾನ” ಎಂಬ ಸಂದೇಶ ಸಾರಲಾಗಿದ್ದು, ಸಾರ್ವಜನಿಕರು ಹಾಗೂ ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಭರತ್, ಯಶೋಧರ, ಅನುಷ ಎಂ.ಆರ್. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸ್ವಯಂ ಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತ ಲಭ್ಯವಾಗುವಂತೆ ಮಾಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಡಿಟಿಸಿ ಪ್ರಾಂಶುಪಾಲರಾದ ಡಾ.ಅಜೀಜ್ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು. ಕೊಡಗು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಸ್ವಾಗತಿಸಿದರು, ನಿರೂಪಿಸಿದರು.