Kodagu

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್

admincoorgdaily

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ  ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಸೋಮಖಶೇಖರ್
ಮಡಿಕೇರಿ:-ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ 30 ವರ್ಷಗಳಲ್ಲಿ ಗಮನಿಸಿದಾಗ ಈ ಬಾರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲೆಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರೆ ನೀಡಿದ್ದಾರೆ. 

      ಕರ್ನಾಟಕ ಅರಣ್ಯ ಇಲಾಖೆ, ಕೊಡಗು ವೃತ್ತ ಮಡಿಕೇರಿ ವತಿಯಿಂದ ನಗರದ ಅರಣ್ಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.  

      ಮಲೆನಾಡು ಭಾಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲೂ ಸಹ ಮಳೆಯಾಗುತ್ತಿತ್ತು. ಆದರೆ ಈಗ ಮಳೆ ಇಲ್ಲದಂತಾಗಿ, ಬೇಸಿಗೆ ವಾತಾವರಣ ಕಾಣುತ್ತಿದೆ. ಆದ್ದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಣೆಗೆ ಹಿಂದಿಗಿಂತ ಇಂದು ಹೆಚ್ಚಿನ ಒತ್ತು ನೀಡುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಅವರು ಪ್ರತಿಪಾದಿಸಿದರು.  
      ನದಿ, ತೊರೆ, ಹಳ್ಳ-ಕೊಳ್ಳ, ಬಾವಿ ಹಾಗೂ ಬೋರ್‍ವೆಲ್‍ಗಳು ಸಹ ನೀರು ಕ್ಷೀಣಿಸುತ್ತಿದೆ. ಮಳೆ- ಬೆಳೆ ಇಲ್ಲದೆ ಇಂದಿನ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತಿದೆ ಎಂದರು. 

      ಭೂಮಿಯ ಮೇಲಿನ ಪರಿಸರ, ಹವಾಮಾನ ಬದಲಾವಣೆಯನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಊಹಿಸಿಕೊಳ್ಳುವುದು, ಕಷ್ಟ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  
     ‘ಪರಿಸರ ಮತ್ತು ಹವಾಮಾನ ವೈಪರೀತ್ಯಕ್ಕೆ ಕಾರಣಗಳೇನು ಎಂಬ ಬಗ್ಗೆ ಪ್ರತಿಯೊಬ್ಬರೂ ಅವಲೋಕನ ಮಾಡಬೇಕು. ಒಂದು ಕಡೆ ಜಗತ್ತು ಒಂದು ಹಳ್ಳಿಯಾಗಿ, ತಾಂತ್ರಿಕವಾಗಿ ವೇಗವಾಗಿ ಓಡುತ್ತಿದೆ. ಆದರೆ ಹವಾಮಾನ ವೈಪರೀತ್ಯದಿಂದ ಮಳೆ-ಬೆಳೆ ಕಡಿಮೆಯಾದರೆ ಬದುಕು ಹೇಗೆ ಎಂಬ ಬಗ್ಗೆ ಚಿಂತಿಸಬೇಕಿದೆ. ಆದ್ದರಿಂದ ಕಾಡನ್ನು ಉಳಿಸುವುದರ ಜೊತೆಗೆ ಎಲ್ಲೆಡೆ ಗಿಡ ಮರಗಳನ್ನು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಲಹೆ ಮಾಡಿದರು.’ 

      ‘ನಾವು ಅರಣ್ಯದೊಳಗೆ ಸಪಾರಿಗೆ ಹೋಗಿ ವನ್ಯಪ್ರಾಣಿ ವೀಕ್ಷಿಸುಲು ಬಯಸುತ್ತೇವೆ, ಆದರೆ ಅದೇ ವನ್ಯ ಪ್ರಾಣಿಗಳು ಊರಿಗೆ ಬಂದಾಗ ಪಟಾಕಿ ಸಿಡಿಸಿ ಓಡಿಸುತ್ತೇವೆ. ಈ ನಾಗರಿಕ ಮನೋಭಾವ ಬದಲಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’ 
      ಅರಣ್ಯದಲ್ಲಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕು ಇದೆ. ಆದ್ದರಿಂದ ಅರಣ್ಯವನ್ನು ಅತಿಕ್ರಮಣ ಮಾಡದೆ ಪರಿಸರಕ್ಕೆ ಪೂರಕವಾಗಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  
      ಕಾಡನ್ನು ಸಂರಕ್ಷಿಸುವಲ್ಲಿ ಇಲಾಖೆಯಲ್ಲಿ ದುಡಿಯುತ್ತಿರುವ ವಾಚರ್, ಗಾರ್ಡ್‍ಗಳು ಸೇರಿದಂತೆ ಎಲ್ಲಾ ಹಂತದ ಸಿಬ್ಬಂದಿಗಳ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.  
 
       ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ಅವರು ಮಾತನಾಡಿ ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹ ಕೈಜೋಡಿಸಬೇಕು ಎಂದು ಕೋರಿದರು. 
       ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಆನೆಗಳು ಹಾಗೂ ಹುಲಿಗಳು, ಜೊತೆಗೆ ಜಿಂಕೆ, ಕಡವೆ, ಹೀಗೆ ವನ್ಯ ಪ್ರಾಣಿಗಳು ವಾಸಿಸುತ್ತಿದ್ದು, ಕಾಡನ್ನು ಸಂರಕ್ಷಿಸಿದರೆ ವನ್ಯ ಪ್ರಾಣಿಗಳು ಸಹ ಬದುಕಲು ಸಾಧ್ಯ. ಆ ನಿಟ್ಟಿನಲ್ಲಿ ಪರಿಸರ, ಜನಜೀವನ ಎಲ್ಲವೂ ಸಹ ಸಮತೋಲನ ಕಾಣಬಹುದು ಎಂದರು. 

        ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರ ಜೊತೆ ಬೆರೆತು ಕರ್ತವ್ಯ ನಿರ್ವಹಿಸಲು ಶ್ರಮಿಸಲಾಗುತ್ತಿದೆ.  ಆದರೂ ಸಹ ಹಲವು ಎಡರು ತೊಡರುಗಳನ್ನು ಎದುರಿಸಿ ಕಾಡು ಸಂರಕ್ಷಣೆಯತ್ತ ಹೆಚ್ಚಿನ ಗಮನಹರಿಸಲಾಗಿದೆ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ವಿವರಿಸಿದರು.  
        ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್ ಅವರು 1966 ರಿಂದ ಇಲ್ಲಿಯವರೆಗೆ ಅರಣ್ಯ ಸಂರಕ್ಷಣೆ ಕರ್ತವ್ಯ ಸಂದರ್ಭದಲ್ಲಿ ಹುತಾತ್ಮರಾದ ಅರಣ್ಯ ರಕ್ಷಕ 65 ಮಂದಿ ಹೆಸರನ್ನು ಓದಿದರು.