ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ; ಬೃಹತ್ ರಕ್ತದಾನ ಶಿಬಿರ
admincoorgdaily

ಮಡಿಕೇರಿ:-ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ–2026 ಅಂಗವಾಗಿ ಮಂಗಳವಾರ ವಿರಾಜಪೇಟೆ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಕೊಡಗು, ಜಿಲ್ಲಾ ರಕ್ತನಿಧಿ ಕೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯಲ್ಲಿ ರಕ್ತದಾನವು ಕೇವಲ ದಾನವಲ್ಲ, ಅದು ಮತ್ತೊಬ್ಬರ ಜೀವ ಉಳಿಸುವ ಮಹತ್ಕಾರ್ಯ ಎಂಬ ಸಂದೇಶದೊಂದಿಗೆ ಬೃಹತ್ ರಕ್ತದಾನ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವಿರಾಜಪೇಟೆಯ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ಜನಾಬ್ ಹಾರಿಸ್ ಬಕವಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮದೀನಾ ಮಸೀದಿ, ವಿರಾಜಪೇಟೆಯ ಮುಖ್ಯ ಕಾರ್ಯದರ್ಶಿಗಳಾದ ಜನಾಬ್ ಅಲ್ಹಾಜ್ ಎಂ.ಜಿ.ಫಹೀಮ್ ಅಹಮದ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿಯ ವೈದ್ಯಾಧಿಕಾರಿ ಡಾ.ಕರುಂಬಯ್ಯ, ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ.ವಿಶ್ವನಾಥ್ ಸಿಂಪಿ, ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಆಶೀರ್ವಾದ್ ಆಸ್ಪತ್ರೆಯ ಡಾ.ಚೇಂದಿರ ಬೋಪಣ್ಣ, ಸಿಎಂಸಿ ಆಸ್ಪತ್ರೆಯ ಡಾ.ಇಬ್ರಾಹಿಂ ಬಾದುಷಾ, ಕೂರ್ಗ್ ಅವೆನ್ಯೂನ ಮೊಹಮ್ಮದ್ ಹನೀಫ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನೀತಾ ಮುತ್ತಣ್ಣ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಉಷಾ, ಕಮಲ ಹಾಗೂ ಡೊನೇಟರ್ಸ್ ಚಾರಿಟೇಬಲ್ ಟ್ರಸ್ಟ್, ವಿರಾಜಪೇಟೆಯ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಿರಾ ಪವಿಲ್ ಉಸ್ಮಾನ್ ಅವರು ವಹಿಸಿದ್ದರು. ಅಲಿರಾ ಪವಿಲ್ ಉಸ್ಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಕರುಂಬಯ್ಯ, ಡಾ. ವಿಶ್ವನಾಥ್ ಸಿಂಪಿ, ಡಾ. ಚೆಂದಿರ ಬೋಪಣ್ಣ ಸೇರಿದಂತೆ ಗಣ್ಯರು ಮಾತನಾಡಿ, ರಕ್ತದಾನದ ಮಹತ್ವ, ರಕ್ತದ ಅವಶ್ಯಕತೆ ಹಾಗೂ ತುರ್ತು ಸಂದರ್ಭಗಳಲ್ಲಿ ರಕ್ತದ ಲಭ್ಯತೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಜಿಲ್ಲೆಯಲ್ಲಿ ಅಪಘಾತಗಳು, ಶಸ್ತ್ರಚಿಕಿತ್ಸೆಗಳು, ಹೆರಿಗೆ ಸಂದರ್ಭಗಳು ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿರಂತರವಾಗಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ಸ್ವಯಂಪ್ರೇರಿತ ರಕ್ತದಾನವೇ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರ ಆಯೋಜಿಸುವಂತೆ ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವ, ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ಕಾರ್ಯ ಹಾಗೂ ಸಮಾಜದಲ್ಲಿ ಸ್ವಯಂಪ್ರೇರಿತ ರಕ್ತದಾನದ ಅರಿವು ಮೂಡಿಸುವ ಕುರಿತು ಒತ್ತಿಹೇಳಲಾಯಿತು. ಆರೋಗ್ಯವಂತ ವ್ಯಕ್ತಿಗಳು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು, ರಕ್ತದಾನಿಗಳು ಹಾಗೂ ಭಾಗವಹಿಸಿದವರು ಸ್ವಯಂಪ್ರೇರಿತ ರಕ್ತದಾನದ ಪ್ರತಿಜ್ಞೆಯನ್ನು ಸ್ವೀಕರಿಸಿದರು. ರಕ್ತದಾನದ ಮಹತ್ವವನ್ನು ಅರಿತು ಸಮಾಜದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡಿದರು.
ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಗೌರವ: ಮೊಹಮ್ಮದ್ ರಾಜಿನ್ – B Positive ರಕ್ತದ ಗುಂಪು – 38 ಬಾರಿ ರಕ್ತದಾನ. ಎಂ.ಕೆ. ರವಿಕುಮಾರ್ – O Positive ರಕ್ತದ ಗುಂಪು–32 ಬಾರಿ ರಕ್ತದಾನ.
ನಿರಂತರವಾಗಿ ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಈ ರಕ್ತದಾನಿಗಳ ಸೇವೆಯನ್ನು ಕಾರ್ಯಕ್ರಮದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮೊಹಮ್ಮದ್ ರಫಿ ಅವರು ಸ್ವಾಗತಿಸಿದರು. ಕೆ.ಟಿ. ಇರ್ಷಾದ್ ಅವರು ಕಾರ್ಯಕ್ರಮ ನಿರೂಪಿಸಿದರು. ರಿಯಾಜ್ ಸಿ.ಕೆ. ಅವರು ವಂದನಾರ್ಪಣೆ ಸಲ್ಲಿಸಿದರು.