ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ನೂತನ ಬೊಲೆರೋ ವಾಹನ ಹಸ್ತಾಂತರ
admincoorgdaily

ವಿರಾಜಪೇಟೆ:ಅರಣ್ಯದಂಚಿನ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಹೊಸ ಮಹೀಂದ್ರ ಬೊಲೆರೋ ವಾಹನವನ್ನು ನೀಡಿದೆ.
ಕೊಡಗಿಗೆ ಆಗಮಿಸಿದ್ದ ಅರಣ್ಯ ಸಚಿವರಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಗೆ ಉತ್ತಮ ವಾಹನ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಅದರಂತೆ ಕ್ಷೇತ್ರದ ಕೆಲವು ಭಾಗಗಳಿಗೆ ವಾಹನ ನೀಡಲಾಗಿದ್ದು, ನೂತನವಾಗಿ ಬಂದ ಮತ್ತೊಂದು ವಾಹನವನ್ನು ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ಶಾಸಕ ಪೊನ್ನಣ್ಣ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಮತ್ತು ಅಧಿಕಾರಿ ವರ್ಗ ಕೈಜೋಡಿಸಿ ಜನರ ತೊಂದರೆ ನಿವಾರಿಸಬೇಕು. ಸರ್ಕಾರ ಹೊಸ ವಾಹನ ನೀಡಿದ್ದು, ಅಧಿಕಾರಿಗಳು ಜನರ ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸಿ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಾಳೇಟೀರ ಬೋಪಣ್ಣ, ತಾಲೂಕು ಕೆಡಿಪಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಮಚ್ಚಾರಂಡ ಕಿರಣ್, ಮಹಾದೇವ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಬೀರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.