Kodagu

ಮಡಿಕೇರಿ-ಭಾಗಮಂಡಲ- ತಲಕಾವೇರಿಗೆ ನೂತನ ಬಸ್ ಸಂಚಾರ ಆರಂಭ

admincoorgdaily

ಮಡಿಕೇರಿ-ಭಾಗಮಂಡಲ- ತಲಕಾವೇರಿಗೆ ನೂತನ ಬಸ್ ಸಂಚಾರ ಆರಂಭ
ಭಾಗಮಂಡಲ: ಭಾಗಮಂಡಲ ಮತ್ತು ತಲಕಾವೇರಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಲವು ವರ್ಷಗಳ ಬಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಮುಂಜಾನೆಯಿಂದ ಅಧಿಕೃತವಾಗಿ ಆರಂಭಗೊಂಡಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಭಾಗಮಂಡಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಗ್ರಾಮಸ್ಥರು ಹಾಗೂ ಪೋಷಕರು ಮನವಿ ಸಲ್ಲಿಸಿದ್ದರು. "ಮುಂಜಾನೆ ಮತ್ತು ಸಂಜೆ ನಿಗದಿತ ಸಮಯಕ್ಕೆ ಸೂಕ್ತ ಬಸ್ ಸೇವೆ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ" ಎಂದು ಶಾಸಕರ ಗಮನಕ್ಕೆ ತಂದಿದ್ದರು.

ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಬಸ್ ಸೇವೆ ಆರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಶಾಸಕರ ಆದೇಶದ ಬೆನ್ನಲ್ಲೇ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಈ ಭಾಗಕ್ಕೆ ನೂತನ ಸಮಯದ ಬಸ್ ಸಂಚಾರವನ್ನು ಪ್ರಾರಂಭಿಸಿದೆ.
ನೂತನ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಹಾಗೂ ಸಾರಿಗೆ ಸಿಬ್ಬಂದಿಯಿಂದ ಹರ್ಷ ವ್ಯಕ್ತವಾಗಿದೆ.