ನಂ.276 ನೇ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತಕ್ಕೆ ರೂ.46 ಲಕ್ಷ ನಿವ್ವಳ ಲಾಭ
admincoorgdaily

ಪೊನ್ನಂಪೇಟೆ, ಸೆ.20: ನಂ 276ನೇ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತವು 2025–26ನೇ ಸಾಲಿನಲ್ಲಿ ರೂ.127.44 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ.108.92 ಲಕ್ಷ ಕ್ರೋಢೀಕೃತ ವ್ಯಾಪಾರ ಲಾಭ ಹಾಗೂ ರೂ.46 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ತಿಳಿಸಿದರು.
ಪೊನ್ನಂಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಕಾರ್ಯಕ್ಷೇತ್ರವು ಪೊನ್ನಂಪೇಟೆ ನಾಡಿನ 15 ಹಾಗೂ ಶ್ರೀಮಂಗಲ ನಾಡಿನ 6 ಗ್ರಾಮಗಳು ಸೇರಿದಂತೆ ಒಟ್ಟು 21 ಗ್ರಾಮಗಳನ್ನು ಒಳಗೊಂಡಿದೆ. ರೈತರಿಗೆ ಅಗತ್ಯವಿರುವ ಗುಣಮಟ್ಟದ ಕೃಷಿ ಉಪಕರಣಗಳು, ರಸಗೊಬ್ಬರ, ಕೀಟನಾಶಕ ಹಾಗೂ ಇತರ ಕೃಷಿ ಪರಿಕರಗಳನ್ನು ಸಂಘದ ಮೂಲಕ ಒದಗಿಸಲಾಗುತ್ತಿದೆ ಎಂದರು.
ಕೃಷಿಯ ಜೊತೆಗೆ ಸಿಮೆಂಟ್, ಕಬ್ಬಿಣ, ಬಟ್ಟೆ, ಮುಳ್ಳುತಂತಿ, ಆರ್‌ಸಿಸಿ ಮೋರಿ ಪೈಪ್ ಸೇರಿದಂತೆ ವಿವಿಧ ನಿರ್ಮಾಣ ಸಾಮಗ್ರಿಗಳು ಹಾಗೂ ಗೃಹಬಳಕೆಯ ವಸ್ತುಗಳ ಮಾರಾಟ, ಸರ್ಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಣೆ ಮತ್ತು ಆರ್‌ಟಿಸಿ ವಿತರಣೆ ಸೇವೆಯನ್ನೂ ಸಂಘ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸಂಘವು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಚಿಲ್ಲರೆ ಪೆಟ್ರೋಲ್ ಬಂಕ್ ಹೊಂದಿದ್ದು, ಗ್ರಾಹಕರಿಗೆ ಸೇವೆ ನೀಡುತ್ತಿದೆ. ರೈತರ ಅನುಕೂಲಕ್ಕಾಗಿ 1,000 ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೊಬ್ಬರ ಗೋದಾಮು ನಿರ್ಮಿಸಲಾಗಿದೆ. ಭತ್ತ, ಕಾಫಿ ಹಾಗೂ ಕಾಳುಮೆಣಸು ಸೇರಿದಂತೆ ರೈತರ ಉತ್ಪನ್ನಗಳನ್ನು ದಾಸ್ತಾನು ಮಾಡಲು ಸುಸಜ್ಜಿತ ಗೋದಾಮು ವ್ಯವಸ್ಥೆ ಇದ್ದು, ಉತ್ಪನ್ನಗಳ ಆಧಾರದ ಮೇಲೆ ರೈತ ಸದಸ್ಯರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಕಾಫಿ ಹಲ್ಲಿಂಗ್ ಘಟಕ ಆರಂಭ;
ಕಾಫಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಾಫಿ ಹಲ್ಲಿಂಗ್ ಘಟಕವನ್ನು ಆರಂಭಿಸಲಾಗಿದೆ. ಸಂಘವು 1.80 ಎಕರೆ ವಿಸ್ತೀರ್ಣದ ಕಾಫಿ ತೋಟವನ್ನೂ ಹೊಂದಿದೆ. ಸದಸ್ಯರ ಅನುಕೂಲಕ್ಕಾಗಿ 2 ಟಿಪಿಎಚ್ ಸಾಮರ್ಥ್ಯದ ನೂತನ ಅಕ್ಕಿ ಗಿರಣಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಮಂಜು ಗಣಪತಿ ತಿಳಿಸಿದರು.
ರೂ.17.43 ಕೋಟಿ ಪಾಲು ಬಂಡವಾಳ;
ಪ್ರಸ್ತುತ ಸಂಘದಲ್ಲಿ 3,422 ಸದಸ್ಯರಿದ್ದು, ಸದಸ್ಯರ ಪಾಲು ಬಂಡವಾಳ ರೂ.174.31 ಲಕ್ಷವಾಗಿದೆ. ಕ್ಷೇಮನಿಧಿ ರೂ.156.16 ಲಕ್ಷ ಹಾಗೂ ಇತರ ಠೇವಣಿ ಮತ್ತು ನಿಧಿಗಳು ಸೇರಿದಂತೆ ಒಟ್ಟು ರೂ.976.30 ಲಕ್ಷವಿದೆ. ಇತರ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ರೂ.221.64 ಲಕ್ಷ ಹೂಡಿಕೆ ಮಾಡಲಾಗಿದೆ. ಸಂಘದ ಚರ ಮತ್ತು ಸ್ಥಿರಾಸ್ತಿಗಳ ಒಟ್ಟು ಮೌಲ್ಯ ರೂ.394.01 ಲಕ್ಷವಾಗಿದೆ ಎಂದು ವಿವರಿಸಿದರು.
2025–26ನೇ ಸಾಲಿನ ಲಾಭದಲ್ಲಿ ಸದಸ್ಯರ ಷೇರು ಮೊತ್ತಕ್ಕೆ ಶೇ.15ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗೀಕರಣವನ್ನು ಕಾಯ್ದುಕೊಂಡು ಬಂದಿದೆ ಎಂದು ಹೇಳಿದರು.
ಸಂಘದಲ್ಲಿ ಕಳೆದ 20–30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನುಭವಿ ನೌಕರರು ಆಡಳಿತ ಮಂಡಳಿಗಳ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಆಂತರಿಕ ಲೆಕ್ಕ ಪರಿಶೋಧಕರಾಗಿ ಎ.ಬಿ. ಸತ್ಯನಾರಾಯಣ ಸೇವೆ ಸಲ್ಲಿಸುತ್ತಿದ್ದಾರೆ. ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸೆ.25ರಂದು 90ನೇ ವಾರ್ಷಿಕ ಮಹಾಸಭೆ;
ಸಂಘದ 2025–26ನೇ ಸಾಲಿನ 90ನೇ ವಾರ್ಷಿಕ ಮಹಾಸಭೆಯು ಸೆ.25ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ. ವರ್ಷoಪ್ರತಿ ನೀಡುವಂತೆ ಸಂಘದ ಸದಸ್ಯರ ಏಳು , ಹತ್ತು ಹಾಗೂ ದ್ವಿತೀಯ ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಮಹಾಸಭೆಯಲ್ಲಿ ನೀಡಲಾಗುವುದು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ನಿರ್ದೇಶಕರಾದ ಮುದ್ದಿಯಡ ಎ. ಸೋಮಯ್ಯ, ಜೋಡುಮಾಡ ಪಿ. ಶ್ಯಾಮ್, ಐನಂಡ ಕೆ. ಬೋಪಣ್ಣ, ಪದಾರ್ಥಿ ಎಸ್. ಮಂಜುನಾಥ್, ಮಾಚಂಗಡ ಬಿ. ಮೊಣ್ಣಪ್ಪ, ಮೂಕಳೇರ ಬಿ. ರಮೇಶ್, ಬೋಡಂಗಡ ಟಿ. ಜಗದೀಶ್, ಮೂಕಳೇರ ಪಿ. ಶಾರದ, ಬಿ.ಎಸ್. ಚಂದ್ರಶೇಖರ್ (ರಾಜ), ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ. ಡಿಕ್ಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಕಳೇರ ಟಿ. ಪೂನಂ ಉಪಸ್ಥಿತರಿದ್ದರು.