ಡ್ರಗ್ಸ್ ಬೇಡ, ಜೀವನ ಬೇಕು - ವಿದ್ಯಾರ್ಥಿಗಳಿಗೆ ಡಾ. ಬೋಪಣ್ಣ ಕರೆ
admincoorgdaily

ವಿರಾಜಪೇಟೆ;ಮಾದಕ ವ್ಯಸನಕ್ಕೆ ಒಳಗಾಗಿ ಅದರ ದಾಸರಾದರೆ ಬದುಕು ಹಾಳಾಗುವುದರೊಂದಿಗೆ ಜೀವ ಜೀವನ ಎರಡನ್ನು ಕಳೆದು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿರಾಜಪೇಟೆ ಆಶೀರ್ವಾದ್ ಮೆಡಿಕಲ್ ಸೆಂಟರ್ ನ ವೈದ್ಯರಾದ ಡಾ. ಸಿ.ಎ.ಬೋಪಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ, ಎನ್.ಎಸ್.ಎಸ್ , ಎನ್.ಸಿ.ಸಿ , ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ವಿಕಸಿತ್ ಭಾರತಕ್ಕಾಗಿ ನಶ ಮುಕ್ತ ಯುವ ಅಭಿಯಾನದ ಕುರಿತು ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮಗೆ ಏನು ಬೇಕು ಎಂದು ನಿರ್ಧರಿಸುವ ಅಧಿಕಾರ ನಮಗಿದೆ. ಆದರಿಂದ ಇತರರನ್ನು ಮೆಚ್ಚಿಸಲು ಅಥವ ಬೇರೆಯವರ ಒತ್ತಾಯಕ್ಕೆ ಸಣ್ಣ ಪ್ರಮಾಣದಲ್ಲಿ ಮಾದಕ ವ್ಯಸನವನ್ನು ಆರಂಭಿಸಿದರೆ ನಂತರ ನಾವು ಅದರ ಸುಳಿಗೆ ಸಿಕ್ಕಿ ವ್ಯಸನವನ್ನು ಬಿಡಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತೇವೆ. ಗಾಂಜ , ಅಫಿಮ್ ಇನ್ನಿತರ ಮಾದಕ ವಸ್ತು ಹಾಗೂ ತಂಬಾಕು ಉತ್ಪನ್ನಗಳನ್ನು ಸೇವಿಸಿದಾಗ ಮೆದುಳಿನಲ್ಲಿ ಪ್ರಮುಖವಾಗಿ ಡೋಪಮೈನ್ ಎಂಬ ರಾಸಾಯನಿಕವು ಅತಿಯಾಗಿ ಬಿಡುಗಡೆಯಾಗುತ್ತದೆ.ಡೋಪಮೈನ್ ಅನ್ನು ಸಾಮಾನ್ಯವಾಗಿ ಖುಷಿ ನೀಡುವ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಡ್ರಗ್ಸ್ ಸೇವಿಸಿದಾಗ ಮೆದುಳಿನ ರಿವಾರ್ಡ್ ಸಿಸ್ಟಮ್ ಉತ್ತೇಜನಗೊಂಡು ಸಾಮಾನ್ಯಕ್ಕಿಂತ ಹಲವು ಪಟ್ಟು ಹೆಚ್ಚು ಡೋಪಮೈನ್ ಬಿಡುಗಡೆಯಾಗುತ್ತದೆ. ಇದರಿಂದ ವ್ಯಕ್ತಿಗೆ ತಾತ್ಕಾಲಿಕವಾಗಿ ತೀವ್ರವಾದ ಸಂತೋಷದೊರೆಯುತ್ತದೆ. ಇದರಿಂದ ಮೆದುಳು ಈ ಕೃತಕ ಆನಂದವನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ ಮತ್ತು ಆ ಸುಖವನ್ನು ಮತ್ತೆ ಪಡೆಯಲು ಡ್ರಗ್ಸ್ ಅನ್ನು ಪದೇ ಪದೇ ಸೇವಿಸುವಂತೆ ಪ್ರೇರೇಪಿಸುತ್ತದೆ. ಇದರಿಂದ ನಿರಂತರ ಸೇವನೆ ಆರಂಭವಾಗಿ ವ್ಯಸನಿಗಳಾಗಿ ಡ್ರಗ್ಸ್ ಸೇವಿಸದೆ ಇರಲಾಗದ ಸ್ಥಿತಿಗೆ ಒಳಗಾಗುತ್ತಾರೆ. ನಂತರ ಮಾದಕ ವಸ್ತುಸಿಗದೆ ಹೋದಾಗ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಡ್ರಗ್ಸ್ ಸೇವನೆಗೆ ಯಾವ ಹಂತಕ್ಕೆ ಬೇಕಾದರು ಅವರು ಇಳಿಯುವ ಪರಿಸ್ಥಿತಿಗೆ ಬರುತ್ತಾರೆ. ಕಳ್ಳತನ , ಕೊಲೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಜೀವನದೊಂದಿಗೆ ಕುಟುಂಬದ ನೆಮ್ಮದಿ ಹಾಳುಮಾಡುತ್ತಾರೆ. ಆದರಿಂದ ಯುವ ಜನತೆ ಮಾದಕತೆ, ತಂಬಾಕು ಉತ್ಪನ್ನಗಳಿಂದ ದೂರ ಇದ್ದು ಉತ್ತಮ ಜೀವನ , ಉತ್ತಮ ಸಮಾಜ ನಿರ್ಮಾಣದ ಪಣ ತೊಟ್ಟು ಭಾರತವನ್ನು ನಶಾ ಮುಕ್ತವಾಗಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ ಜಿ ವೀಣಾ ಯುವ ಸಮುದಾಯ ಎಚ್ಚರಿಕೆಯಿಂದ ಇರಬೇಕು. ಮಾದಕ ದ್ರವ್ಯ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದೈಹಿಕ, ಮಾನಸಿಕ ಸಮಸ್ಯೆಗಳನ್ನು ಅರಿತು ಇವುಗಳಿಂದ ದೂರ ಉಳಿಯಬೇಕು. ಅದರಲ್ಲು ಡ್ರಗ್ಸ್ ಸೇವನೆಗೆ ಒಳಗಾದರೆ ಸಂಪೂರ್ಣ ಜೀವನವೇ ಹಾಳಾಗಿ ಹೋಗುತ್ತದೆ. ಒಮ್ಮೆ ವ್ಯಸನಕ್ಕೆ ದಾಸರಾದರೆ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಹಂತದಲ್ಲೂ ಎಚ್ಚರಿಕೆ ಹೆಜ್ಜೆ ಇಡಿ . ಒಂದು ತಪ್ಪು ಹೆಜ್ಜೆ ಮುಂದೆ ದೊಡ್ಡ ಮಟ್ಟದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಐಕ್ಯೂಎಸಿ ಸಂಯೋಜಕ ಎಲ್ ಆರ್ ರಾಘವೇಂದ್ರ, ಎನ್.ಸಿ.ಸಿ ಅಧಿಕಾರಿ. ಲೆ.ಬಿ.ಬಿ.ಬೋಜಮ್ಮ, ಎನ್.ಎಸ್.ಎಸ್, ವೈ.ಆರ್.ಸಿ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ, ಎನ್.ಸಿ.ಸಿ ಕೆಡೆಟ್ ಗಳು , ಎನ್.ಎಸ್.ಎಸ್ ಸ್ವಯಂ ಸೇವಕರು ಹಾಜರಿದ್ದರು.