ನಂದಿ ನೇಸರ ಉದ್ಯಾನವನದಲ್ಲಿ ಕಾವೇರಿ ಭಾಗಿನ ಅರ್ಪಣೆ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ
admincoorgdaily

ಕೊಡ್ಲಿಪೇಟೆ :- ಕಾವೇರಿ ತೀರ್ಥೋದ್ಭವದ ಪವಿತ್ರ ಸಂದರ್ಭದಲ್ಲಿ ಕೊಡ್ಲಿಪೇಟೆಯ ನಂದಿ ನೇಸರ ಉದ್ಯಾನವನದ ನಂದಿಪುರ ಕೆರೆಯಲ್ಲಿ ಕಾವೇರಿ ಭಾಗಿನ ಅರ್ಪಣೆ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಸಂಜೆ 3 ಗಂಟೆಗೆ ಕಾವೇರಿ ಆರತಿ ಮತ್ತು ಭಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಜೆ 4 ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ನಾಟಕ ತಂಡದ ವತಿಯಿಂದ ಸಾಮಾಜಿಕ ಸಂದೇಶ ಸಾರುವ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಂಜೆ 6 ಗಂಟೆಗೆ ಕೊಡ್ಲಿಪೇಟೆಯ ಗಣಪತಿ ದೇವಸ್ಥಾನದಿಂದ ನಂದಿಪುರ ಕೆರೆಯವರೆಗೆ ನಂದಿವೃಂದ, ಕಲಶ ಹಾಗೂ ಪೂರ್ಣಕುಂಭದೊಂದಿಗೆ ಮಹಿಳೆಯರ ಮೆರವಣಿಗೆ ನಡೆಯಿತು. ಭಕ್ತಿಪೂರ್ವಕವಾಗಿ ನಡೆದ ಮೆರವಣಿಗೆಯು ಕಾರ್ಯಕ್ರಮಕ್ಕೆ ಧಾರ್ಮಿಕ ಮೆರುಗು ನೀಡಿತು.
ಸಂಜೆ 6.30ಕ್ಕೆ ಚಿಕ್ಕಮಗಳೂರಿನ ಶ್ರೀ ದೇವಿ ಗುರುಕುಲದ ಮಾತೆಯರಿಂದ ರುದ್ರಪಠಣ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಜೊತೆಗೆ ಯದುವೀರರ ನೇತೃತ್ವದ ಶ್ರೀ ಶಂಕರ ಶಾಸ್ತ್ರಿಗಳ ತಂಡದಿಂದ ಕಾವೇರಿ ಆರತಿ ನೆರವೇರಿಸಲಾಯಿತು.
ರಾತ್ರಿ 7.55ಕ್ಕೆ ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವದ ಪವಿತ್ರ ಸಂದರ್ಭದೊಂದಿಗೆ ಸಂಯೋಜಿಸಿ, ನಂದಿಪುರ ಕೆರೆಗೆ ಭಕ್ತಿಪೂರ್ವಕವಾಗಿ ಭಾಗಿನ ಅರ್ಪಣೆ ಮಾಡಲಾಯಿತು. ಪೂಜಾ ವಿಧಿವಿಧಾನಗಳನ್ನು ಸ್ಥಳೀಯ ವಿವಿಧ ಮಠಗಳ ಮಠಾದೀಶರು ಹಾಗೂ ವಿವಿದೆಡೆಗಳಿಂದ ಆಗಮಿಸಿದ್ದ ಅರ್ಚಕರುಗಳು ಪಾಲ್ಗೊಂಡು ದಾರ್ಮಿಕ ಕ್ಯೆಂಕರ್ಯಗಳನ್ನು ನೆರೆವೇರಿಸಿದರು, ಭಕ್ತರು ಭಕ್ತಿ ಪೂರ್ವಕವಾಗಿ ಬಾಗವಹಿಸಿದರು,
ರಾತ್ರಿ 8 ಗಂಟೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಲಘು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಹೆಚ್. ಎಸ್. ಚಂದ್ರಮೌಳಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಧಾರ್ಮಿಕ ಶ್ರದ್ಧೆ, ಸಾಂಸ್ಕೃತಿಕ ಪರಂಪರೆ ಹಾಗೂ ಪರಿಸರ ಸೌಂದರ್ಯದ ಮಹತ್ವವನ್ನು ಸಾರಿತು.
ಒಂದು ಕಾಲದಲ್ಲಿ ಮೀನು ಹಿಡಿಯಲು ಹಾಗೂ ಬಟ್ಟೆ ತೊಳೆಯಲು ಮಾತ್ರ ಸೀಮಿತವಾಗಿದ್ದ ನಂದಿಪುರ ಕೆರೆಯನ್ನು ಸುಂದರ ತಾಣವನ್ನಾಗಿ ರೂಪಿಸುವಲ್ಲಿ ಚಂದ್ರಮೌಳಿ ಅವರ ಕೊಡುಗೆ ಗಮನಾರ್ಹವಾಗಿದೆ. ಇಂದು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಂದಿ ನೇಸರ ಉದ್ಯಾನವನವು ಪ್ರಮುಖ ಆಕರ್ಷಣೆಯಾಗಿ ರೂಪುಗೊಂಡಿದ್ದು ಕೆರೆಯ ಸೌಂದರ್ಯ ಮತ್ತು ಮಹತ್ವವನ್ನು ಮತ್ತಷ್ಟು ಎತ್ತಿಹಿಡಿದ ಕಾವೇರಿ ಭಾಗಿನ ಅರ್ಪಣೆ ಕಾರ್ಯಕ್ರಮವು ಸ್ಥಳೀಯರಲ್ಲಿ ಸಂತಸ ಮತ್ತು ಭಕ್ತಿಭಾವವನ್ನು ಮೂಡಿಸಿತು.