ಹೊನ್ನಮ್ಮನಕೆರೆಗೆ ಬಾಗಿನ ಅರ್ಪಣೆ: ಶ್ರದ್ಧಾ ಭಕ್ತಿಯಿಂದ ನೆರವೇರಿದ ಸ್ವರ್ಣಗೌರಿ ಉತ್ಸವ
admincoorgdaily

ಸೋಮವಾರಪೇಟೆ, ಸೆ.15: ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನಕೆರೆ ಕ್ಷೇತ್ರದಲ್ಲಿ ಸ್ವರ್ಣಗೌರಿ ಉತ್ಸವದ ಅಂಗವಾಗಿ ಕೆರೆಗೆ ಬಾಗಿನ ಬಿಡುವ ಕಾರ್ಯಕ್ರಮ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸೋಮವಾರ ನೆರವೇರಿತು.
ಬೆಳಿಗ್ಗೆ ಸೋಮವಾರ 10 ಗಂಟೆಗೆ ಸಂಪ್ರದಾಯದಂತೆ ಶ್ರೀ ಸಿದ್ದೇಶ್ವರ, ಬಸವೇಶ್ವರ, ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿ, ನಂತರ ಕೆರೆಯ ನೀರಿನಲ್ಲಿ ವಿಸರ್ಜಿಸಿದರು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಗೌರಿ ಹಬ್ಬದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಹೊನ್ನಮ್ಮನಕೆರೆಗೆ ವಿವಿಧೆಡೆಗಳಿಂದ ಆಗಮಿಸಿದ ನೂರಾರು ಭಕ್ತರು ಹೊನ್ನಮ್ಮನ ಆಶೀರ್ವಾದ ಪಡೆದರು. ವಿಶೇಷವಾಗಿ ನವದಂಪತಿಗಳು ಕೆರೆಗೆ ಬಾಗಿನ ಅರ್ಪಿಸಿ ಇಷ್ಟಾರ್ಥ ನೆರವೇರಿಕೆಗೆ ಪ್ರಾರ್ಥಿಸಿದರು.
ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಡಾ.ಮಂತರ್ ಗೌಡ ಅವರು ಹೊನ್ನಮ್ಮ ತಾಯಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಹೊನ್ನಮ್ಮ ತಾಯಿ ದೇವಾಲಯದ ಅಭಿವೃದ್ಧಿಗಾಗಿ 10 ಲಕ್ಷ ರೂ. ವೆಚ್ಚದ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಮುಂಬರುವ ದಿನಗಳಲ್ಲಿ ಸಾರ್ವಜನಿಕ ಶೌಚಾಲಯ, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ.ಚಂದ್ರಶೇಖರ್, ಉಪಾಧ್ಯಕ್ಷ ಡಿ.ಬಿ.ವೀರೇಶ್, ಕಾರ್ಯದರ್ಶಿ ಪ್ರದೀಪ್, ಸದಸ್ಯರಾದ ಡಿ.ಬಿ.ಲೋಕೇಶ್, ಎಂ.ಬಿ.ವಸಂತ್, ಖ.ಟಿ.ಭರತ್, ಡಿ.ಟಿ.ಮಂಜುನಾಥ್, ಡಿ.ಎಚ್.ಭರತ್, ಎಂ.ಎಲ್.ಆಕಾಶ್ ಮತ್ತಿತರರು ಇದ್ದರು.