National News

ತೆರೆದ ಸಂಪ್‌ಗೆ ಬಿದ್ದು ಒಂದೂವರೆ ವರ್ಷದ ಕಂದಮ್ಮ ದುರ್ಮರಣ

admincoorgdaily

Baby
ಕೊಯಮತ್ತೂರು, ಸೆ.08: ಒಂದು ಸಣ್ಣ ನಿರ್ಲಕ್ಷ್ಯ ಒಂದು ಕುಟುಂಬದ ನಗುವನ್ನೇ ಕಿತ್ತುಕೊಂಡಿದೆ. ಮನೆಯ ಮುಂದಿನ ಭೂಗತ ನೀರಿನ ಸಂಪ್ ಗೆ ಸರಿಯಾದ ಮುಚ್ಚಳ ಹಾಕದ ಕಾರಣ ಒಂದೂವರೆ ವರ್ಷದ ಪುಟ್ಟ ಕಂದಮ್ಮ ಬಲಿಯಾದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ರತ್ನಗಿರಿ ಬಳಿಯ ವೌಸಿ ನಗರದ ವೇಣುಗೋಪಾಲ್-ಕಲೈವಾಣಿ ದಂಪತಿಯ ಏಕೈಕ ಪುತ್ರ ಧನ್ವಂತ್ (1.5 ವರ್ಷ) ಮೃತಪಟ್ಟ ಬಾಲಕ.

ಸೋಮವಾರ ಎಂದಿನಂತೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು, ತೆರೆದಿದ್ದ ಸಂಪ್ ಒಳಗೆ ಬಿದ್ದಿದೆ. ಮೇಲೊಂದು ತೆಳುವಾದ ತುಕ್ಕು ಹಿಡಿದ ಟಿನ್ ಶೀಟ್ ಮಾತ್ರ ಇತ್ತು. ಮಗು ಕಾಲಿಟ್ಟ ಕೂಡಲೇ ಅದು ಮಗುಚಿ ಬಿದ್ದು ದುರಂತ ಸಂಭವಿಸಿದೆ.

ಗಂಟೆಗಟ್ಟಲೆ ಹುಡುಕಾಟ, ಕೊನೆಗೆ ಸಂಪ್ ನಲ್ಲಿ ಪತ್ತೆ:
ಮಗು ಬಹಳ ಹೊತ್ತು ಕಾಣದಿದ್ದಾಗ ಪೋಷಕರು ಆತಂಕಗೊಂಡು ಬೀದಿ ಬೀದಿ ಹುಡುಕಿದ್ದಾರೆ. ನೆರೆಹೊರೆಯವರೆಲ್ಲ ಸೇರಿ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಸಂಶಯ ಬಂದು ಮನೆಯ ಕೆಳಗಿನ ಸಂಪ್ ನೋಡಿದಾಗ ಮಗು ನೀರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಮನೆಯ ಸುತ್ತಲಿನ ತೆರೆದ ಸಂಪ್, ಬಾವಿ, ಟ್ಯಾಂಕ್ ಗಳಿಗೆ ಕಬ್ಬಿಣದ ಬಲವಾದ ಮುಚ್ಚಳ ಹಾಕಿ ಲಾಕ್ ಮಾಡುವುದು ಅತ್ಯಗತ್ಯ. ಒಂದು ಕ್ಷಣದ ಅಜಾಗರೂಕತೆ ಇಡೀ ಜೀವನದ ದುಃಖಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.