Kodagu

ಯುವಜನರಿಗೆ ಸ್ವಉದ್ಯೋಗ ಕಲ್ಪಿಸುವತ್ತ ತರಬೇತಿ ಕಾರ್ಯಕ್ರಮ ಆಯೋಜಿಸಿ : ಜಿಲ್ಲಾಧಿಕಾರಿ ಸೋಮಶೇಖರ್

admincoorgdaily

ಯುವಜನರಿಗೆ ಸ್ವಉದ್ಯೋಗ ಕಲ್ಪಿಸುವತ್ತ ತರಬೇತಿ ಕಾರ್ಯಕ್ರಮ ಆಯೋಜಿಸಿ  : ಜಿಲ್ಲಾಧಿಕಾರಿ ಸೋಮಶೇಖರ್
ಮಡಿಕೇರಿ:-ಮುಖ್ಯಮಂತ್ರಿ ಅವರ ಕೌಶಲ್ಯ ಕರ್ನಾಟಕ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮವಾಗಿದ್ದು, ಯುವಜನತೆಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಏರ್ಪಡಿಸಿ ಉದ್ಯೋಗ ಕಲ್ಪಿಸುವತ್ತ ಹೆಚ್ಚಿನ ಗಮನಹರಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾ ಕೌಶಲ್ಯ ಮಿಷನ್ ಅನುಷ್ಠಾನ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಜಿಲ್ಲೆಯಲ್ಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಯುವಜನರಿಗೆ ಸ್ವಉದ್ಯೋಗದ ಕೌಶಲ್ಯ ತರಬೇತಿ ನೀಡಿ ಉದ್ಯೋಗದತ್ತ ಗಮನಹರಿಸಲು ಸಲಹೆ, ಮಾರ್ಗದರ್ಶನ ನೀಡಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೂ ಸಹ ಅಗತ್ಯ ತರಬೇತಿ ಕಾರ್ಯಕ್ರಮ ಏರ್ಪಡಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿಗೆ ನಿರ್ದೇಶನ ನೀಡಿದರು. 
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಧಿಕಾರಿ ರೇಖಾ ಗಣಪತಿ ಅವರು ಮಾತನಾಡಿ ಪ್ರಸಕ್ತ ವರ್ಷದಲ್ಲಿ ಮುಖ್ಯಮಂತ್ರಿ ಅವರ ಕೌಶಲ್ಯ ಕರ್ನಾಟಕ ಯೋಜನೆಯಡಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು. 

 ಡಾಟಾ ಎಂಟ್ರಿ ಆಪರೇಟರ್, ಪ್ಲಂಬಿಂಗ್, ಪೇಯಿಟಿಂಗ್, ವಿದ್ಯುತ್ ಚಾಲಿತ ಬ್ಯಾಟರಿ ರಿಪೇರಿ, ನರ್ಸರಿ, ಅಣಬೆ ಬೇಸಾಯ, ಜೇನು ಕೃಷಿ, ಟೈಲರಿಂಗ್, ಎಂಬ್ರಾಯಿಡಿಂಗ್, ಅಟೋ ಮೊಬೈಲ್, ಹೀಗೆ 29 ಬಗೆಯ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ರೇಖಾ ಅವರು ಮಾಹಿತಿ ನೀಡಿದರು. 
ಯುವನಿಧಿ ಯೋಜನೆಯಡಿ ಪದವಿ ಮತ್ತು ಡಿಪ್ಲೋಮ ಪೂರ್ಣಗೊಳಿಸಿದ ಯುವಜನರಿಗೆ ಆರ್ಥಿಕ ನೆರವು ನೀಡುವ ಗ್ಯಾರಂಟಿ ಯೋಜನೆಯಾಗಿದ್ದು, ಈ ಕಾರ್ಯಕ್ರಮದಡಿ ಡಿಬಿಟಿ ಮೂಲಕ ಅರ್ಹರಿಗೆ ಹಣ ಪಾವತಿಸಲಾಗುತ್ತಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್ ಅವರು ಮಾಹಿತಿ ನೀಡಿದರು. 

ಜಿಲ್ಲೆಯಲ್ಲಿ ಒಟ್ಟು 2511 ಯುವಜನರು ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ- 416, ಮಡಿಕೇರಿ 673, ಪೊನ್ನಂಪೇಟೆ 269, ಸೋಮವಾರಪೇಟೆ 731, ವಿರಾಜಪೇಟೆ 422 ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಅವರು ಹೇಳಿದರು. 

ಯುವನಿಧಿ ಪ್ಲಸ್ ಯೋಜನೆಯಡಿ ನಿರುದ್ಯೋಗಿ ಪದವಿ ಮತ್ತು ಡಿಪ್ಲೋಮ ಹೊಂದಿರುವವರ ಉದ್ಯೋಗ ಸಾಮಥ್ರ್ಯವನ್ನು ಸುಧಾರಿಸಲು ಕೌಶಲ್ಯಾಭಿವೃದ್ಧಿ ಉಪಕ್ರಮವನ್ನು ಆಯೋಜಿಸಲಾಗಿದೆ ಎಂದರು. 

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಸಿಡಾಕ್ ವತಿಯಿಂದಲೂ ಉದ್ಯಮಶೀಲತಾ ತಿಳುವಳಿಕೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಎಂದು ಸಿಡಾಕ್ ಸಂಸ್ಥೆಯ ಪ್ರತಿನಿಧಿ ಅವರು ವಿವರಿಸಿದರು. 

ನಲ್-ಜಲ್ ಮಿತ್ರ ಯೋಜನೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದ ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಉಧ್ಯಮಶೀಲತೆ ಸಚಿವಾಲಯ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಲ್-ಜಲ್ ಮಿತ್ರ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಅವರು ಹೇಳಿದರು.  
ಪಿಎಂ ಸ್ವನಿಧಿ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಅವರು ಮಾಹಿತಿ ನೀಡಿದರು. 

ಮೋಂತಿ ಗಣೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ವಿದ್ಯುತ್ ಹಾಗೂ ಪ್ಲಂಮ್ಮಿಂಗ್ ಮತ್ತಿತರ ಕೌಶಲ್ಯ ವೃತ್ತಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ತರಬೇತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು. 

ಅತಿಥಿ ವೃಕ್ಷ ತರಬೇತಿ ಸಂಸ್ಥೆಯ ಶಾಲಿನಿ ಅವರು ಮಾತನಾಡಿ ಇಂದಿನ ಯುವಜನರು ಕೌಶಲ್ಯಾಭಿವೃದ್ಧಿ ಪಡೆಯುವುದರ ಜೊತೆಗೆ ಪೂರ್ಣಾವಧಿಯ ಕೆಲಸ ಪಡೆಯಲು ಇಷ್ಟಪಡುತ್ತಾರೆ ಎಂದು ಅವರು ಮಾಹಿತಿ 
ನೀಡಿದರು. 

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯ್ಕ್ ಅವರು ಮಾತನಾಡಿ ಕೂಡಿಗೆಯಲ್ಲಿರುವ ಯೂನಿಯನ್ ಬ್ಯಾಂಕ್‍ನ ಸ್ವಉದ್ಯೋಗ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಲವು ಸ್ವ ಉದ್ಯೋಗ ತರಬೇತಿ ನಡೆಯುತ್ತಿದ್ದು, ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು. 

ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್, ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಇಂದ್ರೇಶ್ ಅವರು ಮಾತನಾಡಿ ಸಿಸಿಟಿವಿ ಅಳವಡಿಸುವುದು, ಪ್ಲಂಬಿಂಗ್, ಹೌಸ್ ವೈಯರಿಂಗ್, ಕಂಪ್ಯೂಟರ್ ತರಬೇತಿ ಹೀಗೆ ವಿವಿಧ ರೀತಿಯ ಕೌಶಲ್ಯ ತರಬೇತಿಯನ್ನು ಐಟಿಐ ಕಾಲೇಜು ಮೂಲಕ ನೀಡಬಹುದಾಗಿದೆ ಎಂದರು. 

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಸೋಮಶೇಖರ,  ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳಾದ ಕೃಷ್ಣ ಪ್ರಸಾದ್, ನಾಚಪ್ಪ, ಗೋಪಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.