Kodagu

ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು: ಕೊಡವರ ಧ್ವನಿಗೆ ಯಾರ ಅನುಮತಿಯೂ ಬೇಕಿಲ್ಲ: ಜಬ್ಬೂಮಿ ಟ್ರಸ್ಟ್

admincoorgdaily

ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು: ಕೊಡವರ ಧ್ವನಿಗೆ ಯಾರ ಅನುಮತಿಯೂ ಬೇಕಿಲ್ಲ: ಜಬ್ಬೂಮಿ ಟ್ರಸ್ಟ್
ಮಡಿಕೇರಿ: ಕೊಡವರು ತಮ್ಮ ಅಸ್ತಿತ್ವ, ಗುರುತು, ಸಂಸ್ಕೃತಿ, ಭೂಮಿ, ಭಾಷೆ ಅಥವಾ ಸಾಂವಿಧಾನಿಕ ಹಕ್ಕುಗಳ ಕುರಿತು ಧ್ವನಿ ಎತ್ತಲು ಯಾರ ಅನುಮತಿಯನ್ನೂ ಪಡೆಯಬೇಕಾಗಿಲ್ಲ ಎಂದು ಜಬ್ಬೂಮಿ ಚಾರಿಟಬಲ್ ಟ್ರಸ್ಟ್ ಸ್ಪಷ್ಟಪಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಟ್ರಸ್ಟ್, ಇದು ಯಾರ ಮೇಲಿನ ದ್ವೇಷವೂ ಅಲ್ಲ, ಯಾರ ವಿರುದ್ಧದ ಸಂಘರ್ಷವೂ ಅಲ್ಲ, ಭಾರತೀಯ ಸಂವಿಧಾನ ನೀಡಿರುವ ಪ್ರಜಾಪ್ರಭುತ್ವದ ಹಕ್ಕಿನ ಸದುಪಯೋಗವಾಗಿದೆ ಎಂದು ಹೇಳಿದೆ.

"ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ, ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವ ಹಕ್ಕನ್ನು ನೀಡಿದೆ. ಹೀಗಿರುವಾಗ 'ಇದು ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ', 'ನಾವು ಒಪ್ಪುವುದಿಲ್ಲ' ಎನ್ನುವ ರೀತಿಯಲ್ಲಿ ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲತತ್ವವನ್ನೇ ತಪ್ಪಾಗಿ ಅರ್ಥೈಸಿಕೊಂಡಂತೆ" ಎಂದು ಟ್ರಸ್ಟ್ ತಿಳಿಸಿದೆ.

ಬಹುಮತದ ಒಪ್ಪಿಗೆ ಸಂವಿಧಾನಾತ್ಮಕ ಹಕ್ಕಿನ ಪೂರ್ವಶರ್ತವಲ್ಲ. ನಿಜವಾದ ಪ್ರಜಾಪ್ರಭುತ್ವವು ಬಹುಮತದ ಅಧಿಕಾರದ ಜೊತೆಗೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನೂ ಒಳಗೊಂಡಿರುತ್ತದೆ. ಒಂದು ಸಮುದಾಯದ ಬೇಡಿಕೆಯನ್ನು ಮತ್ತೊಂದು ಸಮುದಾಯವು ಒಪ್ಪುವುದಿಲ್ಲವೆಂದ ಮಾತ್ರಕ್ಕೆ ಆ ಬೇಡಿಕೆ ಕೇಳುವ ಹಕ್ಕೇ ಕಳೆದುಹೋಗುವುದಿಲ್ಲ. ಬೇಡಿಕೆಯ ಸಾಂವಿಧಾನಿಕ ಮಾನ್ಯತೆಯನ್ನು ನಿರ್ಧರಿಸುವುದು ಕಾನೂನು ಮತ್ತು ಸಂವಿಧಾನ, ಯಾವುದೇ ಸಮುದಾಯವಲ್ಲ ಎಂದು ಹೇಳಿದೆ.

ಕೊಡವರು ಈ ನಾಡಿನ ವಿಶಿಷ್ಟ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ತಿತ್ವ ಹೊಂದಿರುವ ಸಮುದಾಯ. ಕೊಡಗಿನೊಂದಿಗೆ ಕೊಡವರ ಸಂಬಂಧ ಕೇವಲ ಇಂದಿನ ಆಡಳಿತಾತ್ಮಕ ಗಡಿಗಳ ಪ್ರಶ್ನೆಯಲ್ಲ. ಅದು ಇತಿಹಾಸ, ಭೂಮಿ, ಸಂಸ್ಕೃತಿ, ಭಾಷೆ, ಆಚರಣೆ ಮತ್ತು ತಲೆತಲಾಂತರಗಳ ಸಾಮಾಜಿಕ ಅಸ್ತಿತ್ವದೊಂದಿಗೆ ಬೆಸೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕೊಡಗಿನಲ್ಲಿ ವಾಸಿಸುವ ಪ್ರತಿಯೊಂದು ಸಮುದಾಯಕ್ಕೂ ಸಮಾನ ನಾಗರಿಕ ಹಕ್ಕುಗಳಿವೆ, ಅದನ್ನು ನಾವು ಗೌರವಿಸುತ್ತೇವೆ. ಆದರೆ ಇತರರ ಹಕ್ಕುಗಳನ್ನು ಗೌರವಿಸುವುದು ಎಂದರೆ ನಮ್ಮ ಹಕ್ಕುಗಳನ್ನು ತ್ಯಜಿಸುವುದಲ್ಲ. ವೈವಿಧ್ಯತೆಯನ್ನು ಅಳಿಸುವುದಲ್ಲ, ಅದನ್ನು ಗೌರವಿಸುವುದೇ ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಎಂದು ಟ್ರಸ್ಟ್ ಹೇಳಿದೆ.

ಕೊಡವರು ತಮ್ಮ ಬೇಡಿಕೆಗಳಿಗಾಗಿ ಕಾನೂನುಬದ್ಧವಾಗಿ ನ್ಯಾಯಾಂಗದ ಮೊರೆ ಹೋಗಿದ್ದರೆ, ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೂ ಇದೆ. ಆದರೆ ಉತ್ತರವು ಸಾಕ್ಷ್ಯ, ತರ್ಕ, ಸಂವಿಧಾನ ಮತ್ತು ಕಾನೂನಿನ ಮೂಲಕ ಬರಬೇಕು, ಬಹುಮತದ ಸಂಖ್ಯಾಬಲದಿಂದಲೋ, ಸಾಮಾಜಿಕ ಒತ್ತಡದಿಂದಲೋ ಅಲ್ಲ ಎಂದು ಜಬ್ಬೂಮಿ ಚಾರಿಟಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.