ನಮ್ಮ ಹಕ್ಕು ಬದಲಾಗದು: ಮತ್ತೊಂದು ಸಮುದಾಯಕ್ಕೆ ತೀರ್ಪು ನೀಡುವ ಅಧಿಕಾರವಿಲ್ಲ ಎಂದ ಜಬ್ಬೂಮಿ ಟ್ರಸ್ಟ್
admincoorgdaily

ಮಡಿಕೇರಿ, ಸೆ.15:ಕೊಡವರ ಸಾಂವಿಧಾನಿಕ ಹಕ್ಕುಗಳ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ತೀರ್ಪು ನೀಡುವ ಅಧಿಕಾರ ಯಾವುದೇ ಮತ್ತೊಂದು ಸಮುದಾಯದ ಸಂಘಟನೆಗೆ ಇಲ್ಲ ಎಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಟ್ರಸ್ಟ್, "ನೂರಾರು ಪತ್ರಿಕಾಗೋಷ್ಠಿಗಳನ್ನು ನಡೆಸಿ, ಎಷ್ಟೇ ಹೇಳಿಕೆಗಳನ್ನು ನೀಡಿದರೂ ಒಂದು ಮೂಲಭೂತ ಸತ್ಯ ಬದಲಾಗುವುದಿಲ್ಲ. ನಿಮ್ಮ ಪತ್ರಿಕಾಗೋಷ್ಠಿಗಳ ಸಂಖ್ಯೆ ಹೆಚ್ಚಾದಂತೆ ಸಂವಿಧಾನದ ಅಧಿಕಾರವೂ ಬದಲಾಗುವುದಿಲ್ಲ" ಎಂದು ಹೇಳಿದೆ.
ಮೂಲ ನಿವಾಸಿಗಳಾದ ಕೊಡವರ ಸಾಂವಿಧಾನಿಕ ಹಕ್ಕುಗಳ ಪ್ರಶ್ನೆ ನಮ್ಮ ಮತ್ತು ಸರ್ಕಾರದ ನಡುವಿನ ವಿಚಾರ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳಲು ಕೇಳುತ್ತಿಲ್ಲ, ಯಾರ ವಿರುದ್ಧವೂ ರಾಜಕೀಯ ಅಧಿಕಾರ ಕೇಳುತ್ತಿಲ್ಲ. ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಮಾನ್ಯತೆಗಾಗಿ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದ್ದೇವೆ ಎಂದು ತಿಳಿಸಿದೆ.
ಆ ಬೇಡಿಕೆ ಸಂವಿಧಾನಬದ್ಧವೇ, ನಾವು ಅರ್ಹರೇ, ನಮ್ಮ ಐತಿಹಾಸಿಕ ಹಕ್ಕುಗಳಿಗೆ ಆಧಾರವಿದೆಯೇ ಎಂಬುದನ್ನು ಪರಿಶೀಲಿಸಿ ತೀರ್ಮಾನಿಸುವುದು ಸರ್ಕಾರದ ಮತ್ತು ಸಾಂವಿಧಾನಿಕ ಪ್ರಾಧಿಕಾರಗಳ ಕರ್ತವ್ಯ. "ಕೊಡವರಿಗೆ ಈ ಹಕ್ಕು ಸಿಗಬೇಕು ಅಥವಾ ಸಿಗಬಾರದು" ಎಂದು ತೀರ್ಮಾನಿಸುವ ಅಧಿಕಾರವನ್ನು ಸಂವಿಧಾನ ಎಲ್ಲಿಯೂ ಮತ್ತೊಂದು ಸಮುದಾಯದ ಸಂಘಟನೆಗೆ ನೀಡಿಲ್ಲ ಎಂದು ಟ್ರಸ್ಟ್ ಹೇಳಿದೆ.
ಇದು ಕೊಡವರು ಮತ್ತು ಸರ್ಕಾರದ ನಡುವಿನ ಸಾಂವಿಧಾನಿಕ ವಿಚಾರ. ನಮ್ಮ ಹಕ್ಕಿನ ಅಂತಿಮ ತೀರ್ಪುಗಾರರಾಗುವ ಹಕ್ಕು ಯಾರಿಗೂ ಇಲ್ಲ. ಪತ್ರಿಕಾಗೋಷ್ಠಿ ನೂರು ಇರಲಿ, ಸಾವಿರ ಇರಲಿ ಸಂವಿಧಾನ ಬದಲಾಗುವುದಿಲ್ಲ. ಅಂತಿಮ ನಿರ್ಧಾರವಾಗಬೇಕಾದದ್ದು ಕಾನೂನು ಮತ್ತು ಸಂವಿಧಾನದ ಆಧಾರದ ಮೇಲೆ, ಒತ್ತಡದ ಆಧಾರದ ಮೇಲೆ ಅಲ್ಲ ಎಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.