ವಿರಾಜಪೇಟೆ ಗಣೇಶೋತ್ಸವ ಸ್ಥಗಿತಕ್ಕೆ ಆಕ್ರೋಶ: ಪೊಲೀಸ್ ನಡೆಗೆ ಸಾಮಾಜಿಕ ಕಾರ್ಯಕರ್ತ ಯೋಗೇಶ್ ನಾಯ್ಡು ತೀವ್ರ ಬೇಸರ
admincoorgdaily

ವಿರಾಜಪೇಟೆ: ಇತಿಹಾಸ ಪ್ರಸಿದ್ಧ ವಿರಾಜಪೇಟೆ ನಗರದ ಗೌರಿ ಗಣೇಶೋತ್ಸವ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೇ ಸ್ಥಗಿತಗೊಳಿಸಿರುವ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಯೋಗೇಶ್ ನಾಯ್ಡು ಅವರು ತಮ್ಮ ತೀವ್ರ ಬೇಸರ ಹಾಗೂ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ವಿರಾಜಪೇಟೆಯ ಗಣೇಶೋತ್ಸವ ಎಂದರೆ ಅದು ಕೇವಲ ಹಬ್ಬವಲ್ಲ, ಅದೊಂದು ಐತಿಹಾಸಿಕ ಸಾಂಸ್ಕೃತಿಕ ವೈಭವ. ಈ ಬಾರಿ 11 ದಿನಗಳ ಭವ್ಯ ವಿದ್ಯುತ್ ದೀಪಾಲಂಕಾರ, ನಿರಂತರ ಅನ್ನಸಂತರ್ಪಣೆ ಹಾಗೂ 10 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಮಿತಿಗಳ ನೂರಾರು ಕಾರ್ಯಕರ್ತರು ಹಗಲಿರುಳು ಬೆವರು ಸುರಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ, ನಿದ್ದೆ ಕೆಟ್ಟು ಈ ಉತ್ಸವವನ್ನು ಆಯೋಜಿಸಿದ್ದರು. ಇದನ್ನು ಕಣ್ಣುಂಬಿಕೊಳ್ಳಲು ನೆರೆಹೊರೆಯ ಜಿಲ್ಲೆ ಹಾಗೂ ರಾಜ್ಯಗಳಿಂದ ಜನಸಾಗರವೇ ಹರಿದುಬಂದಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಪೊಲೀಸ್ ಅಪಪ್ರಚಾರದ ಆರೋಪ:
ಉತ್ಸವದ ಸಂದರ್ಭದಲ್ಲಿ ಒಂದು ಸಣ್ಣ ಅಹಿತಕರ ಘಟನೆ ನಡೆದಾಗ, ಮಹಾಗಣಪತಿಯ ಆಶೀರ್ವಾದದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ, ಕೆಲವು ಪೊಲೀಸ್ ಸಿಬ್ಬಂದಿಗಳೇ ಇಬ್ಬರು ಮರಣ ಹೊಂದಿದ್ದಾರೆ ಎಂದು ಸೀರಿಯಸ್ ಆಗಿ ಸುಳ್ಳು ವದಂತಿ ಹರಡಿದರು. ಆ ಮೂಲಕ ಇಡೀ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿಬಿಟ್ಟರು. ಇದು ದೂರದ ಊರುಗಳಿಂದ ಬಂದಿದ್ದ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ನಿರಾಸೆ ಉಂಟುಮಾಡಿದೆ. ಪೊಲೀಸರ ಈ ನಡೆ "ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಹಾಕಿದಂತೆ" ಇದೆ ಎಂದು ಯೋಗೇಶ್ ನಾಯ್ಡು ಆಕ್ರೋಶ ಹೊರಹಾಕಿದ್ದಾರೆ.
ಶಾಂತಿ ಸಭೆ ಬಹಿಷ್ಕರಿಸಲು ಕರೆ:
ಡಿಜೆಗಳನ್ನು ಸಂಪೂರ್ಣವಾಗಿ ಆಫ್ ಮಾಡಿಸಿ, ಇಡೀ ಹಬ್ಬದ ವಾತಾವರಣವನ್ನೇ ಹಾಳು ಮಾಡಿದ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿರುವ ಅವರು, ಮುಂದಿನ ದಿನಗಳಲ್ಲಿ ಪೊಲೀಸರು ಕರೆಯುವ ಯಾವುದೇ ಗಣಪತಿ ಮೀಟಿಂಗ್ ಹಾಗೂ ಶಾಂತಿ ಸಭೆಗಳಿಗೆ ಯಾರೂ ಹೋಗಬಾರದು, ಸಭೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ ವಿರೋಧ ವ್ಯಕ್ತಪಡಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇಷ್ಟೆಲ್ಲಾ ಗೊಂದಲಗಳ ನಡುವೆಯೂ, ವಿರಾಜಪೇಟೆ ನಗರದ ಹಿಂದೂ, ಮುಸ್ಲಿಂ ಹಾಗೂ ಕ್ರೆöÊಸ್ತ ಧರ್ಮದ ಎಲ್ಲಾ ಬಂಧುಗಳು ಒಂದಾಗಿ, ಸೌಹಾರ್ದತೆಯಿಂದ ಈ ಕಾರ್ಯಕ್ರಮಕ್ಕೆ ಕೈಜೋಡಿಸಿ ಯಶಸ್ವಿಗೊಳಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.