Kodagu

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ

admincoorgdaily

ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ
ನಾಪೋಕ್ಲು: ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು ಹಾಗೂ ಮುಂಬರುವ ಪರೀಕ್ಷಾ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಶಾಲೆಯ ಸಿವಿಲ್ ಕಾಮಗಾರಿ ಉಪಸಮಿತಿ ಅಧ್ಯಕ್ಷರಾದ ಕೆ.ಎ. ಹಾರಿಸ್ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ, ಅವರ ನಿಯಮಿತ ಹಾಜರಾತಿ ಹಾಗೂ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ಪೋಷಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ಮಕ್ಕಳ ಭವಿಷ್ಯ ಉಜ್ವಲವಾಗಲು ಪೋಷಕರ ಸಹಕಾರ ಬಹಳ ಮುಖ್ಯ. ಪೋಷಕರು ಮನೆಯಿಂದಲೇ ಮಕ್ಕಳಲ್ಲಿ ಶಿಸ್ತು, ಶುಚಿತ್ವ ಹಾಗೂ ಸಮಯಪ್ರಜ್ಞೆಯನ್ನು ಬೆಳೆಸಬೇಕು. ಸರ್ಕಾರಿ ಶಾಲೆ ಹಾಗೂ ಉಚಿತ ಶಿಕ್ಷಣವೆಂದು ನಿರ್ಲಕ್ಷ್ಯ ವಹಿಸಿದರೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದಂತಾಗುತ್ತದೆ. ಎಲ್ಲವನ್ನೂ ಮರಳಿ ಪಡೆಯಬಹುದು, ಆದರೆ ಕಳೆದು ಹೋದ ಸಮಯವನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದರಲ್ಲದೆ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರೆದಂತೆ ವಿದ್ಯಾರ್ಥಿಗಳಿಗೂ ಮೊಬೈಲ್ ಅವಶ್ಯಕತೆಯಿದೆ. ಆದರೆ, ಅದನ್ನು ನಿಯಮಿತವಾಗಿ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು ಮೊಬೈಲ್‌ನ ದಾಸರಾಗಬಾರದು. ಜೊತೆಗೆ ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು, ಎಂದು ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಎ.ಎಂ ವಿಶಾಲ ಅವರು ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಕಲಿಕೆ, ಹಾಜರಾತಿ, ಶಿಸ್ತು ಹಾಗೂ ಪರೀಕ್ಷಾ ಸಿದ್ಧತೆಯ ಬಗ್ಗೆ ಪೋಷಕರು ನಿರಂತರ ಗಮನಹರಿಸಬೇಕು. ಕಾಲೇಜು ಮತ್ತು ಪೋಷಕರ ನಡುವಿನ ಉತ್ತಮ ಸಹಕಾರದಿಂದ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿಗಳು ಬಾಣದಂತೆ ಗುರಿ ಮುಟ್ಟಲು ಪೋಷಕರು ಬಿಲ್ಲಿನಂತೆ ಬೆಂಬಲವಾಗಿ ನಿಲ್ಲಬೇಕು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡರು.

 ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ಸಚಿನ್, ಗಗನ್, ಶೈಜಿ, ಕೃತಿಕ, ಮೇಲುಸ್ತುವಾರಿ ಸಮಿತಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

ವರದಿ :ಝಕರಿಯ ನಾಪೋಕ್ಲು