Kodagu

ಕ.ಸಾ.ಪ.ವತಿಯಿಂದ ತೊರೆನೂರು ಪ್ರೌಢಶಾಲೆಯಲ್ಲಿ ನಡೆದ "ಗ್ರಾಮೀಣ ಜನಪದ ಸೊಗಡು" ಕುರಿತು ಪಟೇಲ್ ಸಣ್ಣಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ

admincoorgdaily

ಕ.ಸಾ.ಪ.ವತಿಯಿಂದ ತೊರೆನೂರು ಪ್ರೌಢಶಾಲೆಯಲ್ಲಿ ನಡೆದ "ಗ್ರಾಮೀಣ ಜನಪದ ಸೊಗಡು" ಕುರಿತು ಪಟೇಲ್ ಸಣ್ಣಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ
ಕುಶಾಲನಗರ : 
ಕನ್ನಡ ಜನಪದ ಸಾಹಿತ್ಯವು ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಗ್ರಾಮೀಣ ಸೊಗಡು, ಕಲೆ- ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ ಎಂದು
 ಬಾಳೆಲೆ ವಿಜಯಲಕ್ಷ್ಮಿ ಪಿಯೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಆದ ಸಾಹಿತಿ ಡಾ ಜೆ.ಸೋಮಣ್ಣ ಹೇಳಿದರು.

      ಕೊಡಗು ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ಹಾಗೂ ಕುಶಾಲನಗರ ತಾಲ್ಲೂಕು ಕ.ಸಾ.ಪ.ಘಟಕ ಹಾಗೂ ಹೆಬ್ಬಾಲೆ ವಲಯದ ಕ.ಸಾ.ಪ.ಘಟಕದ ವತಿಯಿಂದ
  ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ರಾಷ್ಟ್ರಕವಿ‌ ಕುವೆಂಪು ಕನ್ನಡ ಭಾಷಾ ಸಂಘದ  ಆಶ್ರಯದಲ್ಲಿ  
 "ಗ್ರಾಮೀಣ ಜನಪದ ಸೊಗಡು" 
ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಪಟೇಲ್ ಸಣ್ಣಯ್ಯ ವಾರ್ಷಿಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಜನಪದ ಸಾಹಿತ್ಯ, ಧಾರ್ಮಿಕ, ಸಂಸ್ಕೃತಿ ಮತ್ತು ಪರಿಸರ ಕುರಿತು ಒಂದು ಅವಲೋಕನ ನಡೆಸಿ 
 ಮಾತನಾಡಿದರು.

ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳ ಕುರಿತು ಸವಿಸ್ತಾರವಾಗಿ ವಿವರಿಸುತ್ತಾ,
ಜನಪದ ಸಾಹಿತ್ಯ ಎಲ್ಲಾ ಸಾಹಿತ್ಯದ ತಾಯಿಬೇರು. ಸಮಾಜದಲ್ಲಿ ಗ್ರಾಮೀಣ ಸೊಗಡಿನ ಜಾನಪದ ಸಾಹಿತ್ಯದಲ್ಲಿ ನಿಜವಾದ ಮಾನವೀಯ  ಮತ್ತು ಸಾಮಾಜಿಕ ಮೌಲ್ಯಗಳು ಇವೆ ಎಂದರು.

    ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಇಂತಹ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತುಂಬುವ ಜಾನಪದ ಕಲೆ, ಸಾಹಿತ್ಯವನ್ನು ಯುವಜನಾಂಗ ಮೈಗೂಢಿಸಿಕೊಳ್ಳಬೇಕು ಎಂದು
ಡಾ ಜೆ.ಸೋಮಣ್ಣ ಹೇಳಿದರು.
 
    ಜನಪದದಲ್ಲಿ ಗ್ರಾಮೀಣ ಕೃಷಿಕರ ಶ್ರಮಿಕ ಸಂಸ್ಕೃತಿಯನ್ನು ಮತ್ತು ಸ್ತ್ರೀಯರ ಸಂಭ್ರಮದ ಆಚರಣೆಗಳನ್ನು ಪ್ರತಿನಿಧಿಸುವ ಕಲೆ ಹಾಗೂ ವಿಶಿಷ್ಟ ಹಾಡುಗಳು
  ಜನಪದ  ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.
     ಆಡುಭಾಷೆಯಲ್ಲಿನ ಪದಗಳ ಜೋಡಣೆಯನ್ನಾಧರಿಸಿ ತಮ್ಮ ದೈನಂದಿನ ಬದುಕಿನ ಕಷ್ಟ, ಸುಖ, ಸಂಬಂಧ, ಅನುಭವಗಳನ್ನೇ ಜನಪದರು ಪದವಾಗಿಸಿದವರು. ಅವರು ಅಕ್ಷರ ಜ್ಞಾನ ಹೊಂದಿವರಲ್ಲ. ಆದರೂ ಸಾರ್ವಕಾಲಿಕ ಪದ ಕಟ್ಟಿ ಹಾಡಿದವರು’ ಎಂದು ಡಾ ಸೋಮಣ್ಣ ಹೇಳಿದರು.

ಪ್ರಕೃತಿ ಮಡಿಲಿನಲ್ಲಿರುವ ಹಸಿರು  ಪರಿಸರದಲ್ಲಿನ ಈ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ಪೂರಕವಾಗಿದೆ.

    ಶಾಲಾ ಆಡಳಿತ‌ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದವು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಉತ್ತಮ ಶಾಲಾ ವನ ನಿರ್ಮಾಣ ಹಾಗೂ ಶಾಲಾ ವಾತಾವರಣ ನಿರ್ಮಿಸಲು ಕಾರಣರಾದವರಿಗೆ ಡಾ ಸೋಮಣ್ಣ ಅಭಿನಂದನೆ ಸಲ್ಲಿಸಿದರು.

  ಸಾಹಿತ್ಯ ದತ್ತಿ ಕಾರ್ಯಕ್ರಮಗಳ ಮಹತ್ವ ಹಾಗೂ ಗ್ರಾಮೀಣ ಜನಪದ ಕಲೆಗಳ ಸಂರಕ್ಷಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, 
ಕನ್ನಡ ಸಾಹಿತ್ಯ ಬೆಳವಣಿಗೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ ಎಂದರು.

ಜಾನಪದ ಕೃಷಿ ಜೀವನವೇ ನಿಜವಾದ ಗ್ರಾಮೀಣ ಜನಪದ ಸಂಸ್ಕ್ರತಿಯ ಪ್ರತೀಕವಾಗಿದೆ.
ಇಂದಿನ ಯುವಜನಾಂಗಕ್ಕೆ ಜನಪದ ಕಲೆ, ಸಂಸ್ಕ್ರತಿ, ಪರಂಪರೆಯೊಂದಿಗೆ ಜನಪದ ಸಾಹಿತ್ಯದ ಮಹತ್ವ ಹಾಗೂ ಜನಪದ ಸಂಸ್ಕ್ರತಿಯ ರಕ್ಷಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಂತಹ ಜನಪದ ದತ್ತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

 'ಸಾವಿರಾರು ವರ್ಷಗಳಿಂದ ಕನ್ನಡ ನಾಡಿನ ನೆಲದ ಜನಪದ ಸೊಗಡು ಸಾಹಿತ್ಯಕ್ಕೆ ಪ್ರೇರಣೆಯಾಗಿದೆ’. 
ಕನ್ನಡ ಜನಪದ ಸಾಹಿತ್ಯವು ಗ್ರಾಮೀಣ ಜನರ ಜೀವನದ ಸಹಜ ಅನುಭವಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುವ ಶ್ರೀಮಂತ ನೆಲದ ಸೊಗಡಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್.ಸತ್ಯನಾರಾಯಣ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು
 ಗ್ರಾಮೀಣ ಶ್ರೀಮಂತ ಜನಪದ ಕಲೆ, ಸಂಸ್ಕ್ರತಿ, ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿಗಳು ಜನಪದ ಕಲೆ, ಸಂಸ್ಕ್ರತಿಯ ಸಂರಕ್ಷಣೆಗೆ ಪಣ ತೊಡಬೇಕು ಎಂದರು.

ಬಹುಮಾನ ವಿತರಿಸಿ ಮಾತನಾಡಿದ ಕುಶಾಲನಗರ ಎ.ಪಿ.ಸಿ.ಎಂ.ಎಸ್. ನ ಅಧ್ಯಕ್ಷ ಎಚ್.ಬಿ.ಚಂದ್ರಪ್ಪ, ಜನಪದ ಸಂಸ್ಕ್ರತಿಯ ಪ್ರತೀಕವಾದ
ಈ ಶಾಲಾ ಪರಿಸರವು ಮಕ್ಕಳ ಕಲಿಕೆಗೆ ತುಂಬಾ ಸಹಕಾರಿಯಾಗಿದೆ.ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಗೋಷ್ಠಿಗಳ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಲಿಕೆ ಹಾಗೂ  ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.

   ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಮಾತನಾಡಿ,
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು   ಉತ್ತಮ ಜ್ಞಾನ ವೃದ್ಧಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.

    ತೊರೆನೂರು ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ.ಪಾಂಡುರಂಗ ಮಾತನಾಡಿ, ಇಂತಹ ದತ್ತಿ ಕಾರ್ಯಕ್ರಮಗಳು ಗ್ರಾಮಾಂತರ ಪ್ರದೇಶದ ಜನರಲ್ಲಿ ಜನಪದ ಸಾಹಿತ್ಯದ ಬಗ್ಗೆ ಪರಿಚಯಿಸಲು ಸಹಕಾರಿಯಾಗಿದೆ. ಸಾಹಿತ್ಯದ ಬೆಳವಣಿಗೆ ಹಾಗೂ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಇಂತಹ ದತ್ತಿ ಕಾರ್ಯಕ್ರಮಗಳು  ಹೆಚ್ಚೆಚ್ಚು ನಡೆಯಬೇಕು ಎಂದರು.

 ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಟಿ.ಎಂ.ಮೋಹನ್ ರಾಜ್ ಮಾತನಾಡಿ ಬಯಲುಸೀಮೆಯ ಜನಪದ ಸಂಸ್ಕ್ರತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಸಾಹಿತ್ಯ ಗೋಷ್ಠಿಗಳು ಸಹಕಾರಿಯಾಗಿವೆ ಎಂದರು.
ಕನ್ನಡ ಭಾಷಾ ಶಿಕ್ಷಕ ಟಿ.ಬಿ.ಮಂಜುನಾಥ್ ದತ್ತಿ ಉಪನ್ಯಾಸಗಳಿಂದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಾಗಲಿದೆ ಎಂದರು.

ವಿರಾಜಪೇಟೆ ತಾಲ್ಲೂಕು ಕ.ಸಾ.ಪ.ಮಾಜಿ ಅಧ್ಯಕ್ಷ‌ ಮಧೋಶ್ ಪೂವಯ್ಯ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಎಂ.ರಘು,
ಕುಶಾಲನಗರ ತಾಲ್ಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್,
 ಹೆಬ್ಬಾಲೆ ವಲಯದ ಕ.ಸಾ.ಪ.ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಕಾರ್ಯದರ್ಶಿ ಎಚ್.ಎನ್.ಸುಬ್ರಮಣ್ಯ, ಜಾನಪದ ಕಲಾವಿದ ಭರಮಣ್ಣ ಟಿ.ಬೇಟಗೇರಿ, ಸಿ.ಆರ್.ಪಿ
ಎಂ.ಕೆ.ದಯಾನಂದ್, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಟಿ.ಎಚ್.ಗಣೇಶ್, ಸದಸ್ಯೆ ಗೌರಮ್ಮ ಮಂಜುನಾಥ್,
ಕನ್ನಡ ಭಾಷಾ ಶಿಕ್ಷಕ ಟಿ.ಬಿ.ಮಂಜುನಾಥ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.
   ಶಿಕ್ಷಕ ಜಿ.ಶ್ರೀಹರ್ಷ ಸ್ವಾಗತಿಸಿದರು.ಶಿಕ್ಷಕ ಟಿ.ಬಿ.ಮಂಜುನಾಥ್ ನಿರ್ವಹಿಸಿದರು. 

ಜಾನಪದ ಕಲಾವಿದ ಭರಮಣ್ಣ ಟಿ.ಬೇಟಗೇರಿ ಜಾನಪದ ಗೀತೆ ಹಾಡಿ ಪ್ರೇಕ್ಷಕರ ಗಮನ ಸೆಳೆದರು.
ಸನ್ಮಾನ: ಇದೇ ವೇಳೆಯಲ್ಲಿ ದತ್ತಿ ಉಪನ್ಯಾಸ ನೀಡಿದ ಸಾಹಿತಿ ಡಾ ಜೆ.ಸೋಮಣ್ಣ ಅವರನ್ನು ಕ.ಸಾ.ಪ.ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ: ದತ್ತಿ ಉಪನ್ಯಾಸದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ವಿಜೇತಗೊಂಡವರಿಗೆ ಬಹುಮಾನ ವಿತರಿಸಲಾಯಿತು.