National News

ವಾಟ್ಸ್ಆ್ಯಪ್‌ನಲ್ಲಿ ಪ್ರತಿ ಮೆಸೇಜ್‌ಗೆ ಹಣ? ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ

admincoorgdaily

ವಾಟ್ಸ್ಆ್ಯಪ್‌ನಲ್ಲಿ ಪ್ರತಿ ಮೆಸೇಜ್‌ಗೆ ಹಣ? ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿ
ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳಿಸಲು ಇನ್ನು ಹಣ ಪಾವತಿಸಬೇಕೇ? ಅಕ್ಟೋಬರ್ 1ರಿಂದ ಒಂದು ಸಂದೇಶಕ್ಕೆ 14 ಪೈಸೆ ಶುಲ್ಕ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಾಹಿತಿ ನಿಜವೇ? ಈ ಶುಲ್ಕ ಯಾರಿಗೆ ಅನ್ವಯ? ಸಾಮಾನ್ಯ ಜನರು ಹಣ ಕೊಡಬೇಕಾ? ಇಲ್ಲಿದೆ ಸತ್ಯಾಸತ್ಯತೆ.

ಮೊದಲ ಸ್ಪಷ್ಟನೆ: ಸಾಮಾನ್ಯ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ

ಈ 14 ಪೈಸೆ ಶುಲ್ಕದ ಸುದ್ದಿ ನಿಜ. ಆದರೆ ಇದು ಸಾಮಾನ್ಯವಾಗಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಾಟ್ಸ್ಆ್ಯಪ್ ಬಳಸುವವರಿಗೆ ಅನ್ವಯಿಸುವುದಿಲ್ಲ. ವೈಯಕ್ತಿಕ ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸುವುದು ಎಂದಿನಂತೆಯೇ ಮುಂದುವರಿಯುತ್ತದೆ, ಯಾವುದೇ ನೇರ ಪರಿಣಾಮವಿಲ್ಲ.

ಅಲ್ಲದೆ ಸಣ್ಣ ವ್ಯಾಪಾರಿಗಳು ಬಳಸುವ ಪ್ರತ್ಯೇಕ *ವಾಟ್ಸ್ಆ್ಯಪ್ ಬಿಸಿನೆಸ್ ಆ್ಯಪ್‌*ಗೂ ಈ ನಿರ್ದಿಷ್ಟ ಬೆಲೆ ಬದಲಾವಣೆ ಅನ್ವಯಿಸುವುದಿಲ್ಲ.

ಇದು ಗ್ರಾಹಕರಿಗೆ ಸಂದೇಶ ಕಳುಹಿಸುವ ವ್ಯವಹಾರಗಳ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ ಗೆ ಸಂಬಂಧಿಸಿದ ಬದಲಾವಣೆಯಾಗಿದೆ. ಮುಖ್ಯವಾಗಿ ದೊಡ್ಡ ಪ್ರಮಾಣದ ಗ್ರಾಹಕ ಸಂವಹನಕ್ಕಾಗಿ ಬಳಸುವ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್ ಇದಕ್ಕೆ ಒಳಪಡುತ್ತದೆ.

ಅಂದರೆ ದೊಡ್ಡ ಕಂಪನಿಗಳು, ಬ್ಯಾಂಕ್‌ಗಳು, ಆನ್‌ಲೈನ್ ಶಾಪಿಂಗ್ ಸಂಸ್ಥೆಗಳು, ಪ್ರವಾಸ ಮತ್ತು ಆಹಾರ ವಿತರಣಾ ಸೇವೆಗಳು ಸೇರಿದಂತೆ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವ್ಯವಹಾರಗಳಿಗೆ ಈ ಶುಲ್ಕ ಅನ್ವಯಿಸುತ್ತದೆ.

ಉದಾಹರಣೆಗೆ: ನೀವು ಆನ್‌ಲೈನ್‌ನಲ್ಲಿ ವಸ್ತು ಖರೀದಿಸಿದಾಗ ಆರ್ಡರ್ ದೃಢೀಕರಣ, ಲಾಗಿನ್‌ಗಾಗಿ OTP ವಾಟ್ಸ್ಆ್ಯಪ್‌ನಲ್ಲಿ ಬಂದರೆ, ವಿತರಣೆಯ ಮಾಹಿತಿ ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಚ್ಚರಿಕೆ ವಾಟ್ಸ್ಆ್ಯಪ್‌ನಲ್ಲಿ ಬಂದರೆ, ಆ ಸಂದೇಶವನ್ನು ಕಳುಹಿಸುವ ಸಂಸ್ಥೆ ಮೆಟಾಗೆ ಶುಲ್ಕ ಪಾವತಿಸಬೇಕು. ಗ್ರಾಹಕರು ಈ ಶುಲ್ಕವನ್ನು ಪಾವತಿಸುವುದಿಲ್ಲ.

ಅಕ್ಟೋಬರ್ 1ರಿಂದ ಏನು ಬದಲಾಗಲಿದೆ?

ಮೆಟಾ ಸಂಸ್ಥೆ *ಅಕ್ಟೋಬರ್ 1, 2026*ರಿಂದ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ನ ಸಂದೇಶ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತಿದೆ. ಇದುವರೆಗೆ ಗ್ರಾಹಕರೊಂದಿಗೆ ನಡೆಯುವ 24 ಗಂಟೆಗಳ ಸೇವಾ ಸಂವಹನ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿತ್ತು. ಇನ್ನು ಮುಂದೆ ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ಅನ್ವಯಿಸಲಿದೆ.

ಪ್ರತಿ ತಿಂಗಳು ಮೊದಲ 1,000 ಮೆಸೇಜ್ ಉಚಿತ

ವ್ಯವಹಾರಗಳಿಗೆ ಸ್ವಲ್ಪ ವಿನಾಯಿತಿಯನ್ನು ಮೆಟಾ ನೀಡಿದೆ. ಪ್ರತಿ ವ್ಯವಹಾರದ ದೂರವಾಣಿ ಸಂಖ್ಯೆಗೆ ತಿಂಗಳಿಗೆ ಮೊದಲ 1,000 ಸೇವಾ ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿರುತ್ತದೆ. 1,000 ಮಿತಿ ಮುಗಿದ ಬಳಿಕ ಕಳುಹಿಸುವ ಹೆಚ್ಚುವರಿ ಸೇವಾ ಸಂದೇಶಗಳಿಗೆ ಶುಲ್ಕ ವಿಧಿಸಲಾಗುತ್ತದೆ.

ಉದಾಹರಣೆಗೆ, ಒಂದು ಕಂಪನಿ ತಿಂಗಳಲ್ಲಿ 1,500 ಸೇವಾ ಸಂದೇಶಗಳನ್ನು ಕಳುಹಿಸಿದರೆ ಮೊದಲ 1,000ಕ್ಕೆ ಶುಲ್ಕ ಇರುವುದಿಲ್ಲ. ಉಳಿದ 500 ಸಂದೇಶಗಳಿಗೆ ಮಾತ್ರ ಅನ್ವಯಿಸುವ ದರದಂತೆ ಹಣ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಪ್ರತಿ ಹೆಚ್ಚುವರಿ ಸೇವಾ ಸಂದೇಶಕ್ಕೆ ಮೂಲ ದರ 0.115 ರೂ.ಆಗಿದ್ದು, 18% GST ಸೇರಿಸಿದರೆ ಸುಮಾರು 14 ಪೈಸೆ ಆಗುತ್ತದೆ.

ಎಲ್ಲಾ ಸಂದೇಶಗಳಿಗೂ ಒಂದೇ ದರವಿಲ್ಲ - ಮಾರ್ಕೆಟಿಂಗ್‌ಗೆ 1.02 ರೂ.;

ಉತ್ಪನ್ನದ ಕೊಡುಗೆ, ರಿಯಾಯಿತಿ, ಮಾರಾಟದ ಮಾಹಿತಿ ಅಥವಾ ಪ್ರಚಾರದ ಸಂದೇಶಗಳನ್ನು ಕಳುಹಿಸುವ 

ಮಾರ್ಕೆಟಿಂಗ್ ಸಂದೇಶಗಳಿಗೆ ಹೆಚ್ಚಿನ ಶುಲ್ಕವಿದೆ.

ಭಾರತದಲ್ಲಿ ಇಂತಹ ಸಂದೇಶಗಳಿಗೆ ಪ್ರತಿ ತಲುಪಿದ ಸಂದೇಶಕ್ಕೆ 0.8631 ರೂ. ಮೂಲ ದರನಿಗದಿಯಾಗಿದೆ. 18% GST ಸೇರಿಸಿದರೆ ಇದು ಸುಮಾರು 1.02 ರೂ. ಆಗುತ್ತದೆ. ಹೀಗಾಗಿ ಗ್ರಾಹಕರಿಗೆ ಸಾವಿರಾರು ಪ್ರಚಾರ ಸಂದೇಶಗಳನ್ನು ಕಳುಹಿಸುವ ದೊಡ್ಡ ಕಂಪನಿಗಳ ಮೇಲೆ ಇದರ ಪರಿಣಾಮ ಹೆಚ್ಚು ಇರಬಹುದು.

OTP ಸಂದೇಶಕ್ಕೂ ಶುಲ್ಕವಿದೆಯೇ?

ಹೌದು. ದೃಢೀಕರಣಕ್ಕಾಗಿ ಕಳುಹಿಸುವ OTP ಅಥವಾ ಲಾಗಿನ್ ಕೋಡ್‌ಗಳಂತಹ ಸಂದೇಶಗಳಿಗೂ ಪ್ರತ್ಯೇಕ ದರ ಅನ್ವಯಿಸುತ್ತದೆ. ಭಾರತದಲ್ಲಿ ಇದರ ಮೂಲ ದರವೂ ಪ್ರತಿ ಸಂದೇಶಕ್ಕೆ 0.115 ರೂ./ಎಂದು ಮೆಟಾದ ದರಪಟ್ಟಿಯಲ್ಲಿ ನೀಡಲಾಗಿದೆ. ತೆರಿಗೆ ಸೇರಿದ ಬಳಿಕ ಮೊತ್ತ ಸುಮಾರು 14 ಪೈಸೆ ಆಗುತ್ತದೆ.

ಗ್ರಾಹಕರು ಕಂಪನಿಗೆ ಮೆಸೇಜ್ ಮಾಡಿದರೆ ಶುಲ್ಕ ಇದೆಯೇ?

ಇಲ್ಲಿಯೂ ಗ್ರಾಹಕರಿಗೆ ಯಾವುದೇ ಹೊಸ ಶುಲ್ಕವಿಲ್ಲ. ನೀವು ಬ್ಯಾಂಕ್, ವಿಮಾ ಸಂಸ್ಥೆ, ಆನ್‌ಲೈನ್ ಖರೀದಿ ಸಂಸ್ಥೆ ಅಥವಾ ಬೇರೆ ಯಾವುದೇ ವ್ಯವಹಾರಕ್ಕೆ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದರೆ ಅದಕ್ಕಾಗಿ ಹಣ ಪಾವತಿಸಬೇಕಾಗಿಲ್ಲ. ಗ್ರಾಹಕರಿಂದ ವ್ಯವಹಾರಗಳಿಗೆ ಕಳುಹಿಸುವ ಸಂದೇಶಗಳು ಉಚಿತವಾಗಿಯೇ ಮುಂದುವರಿಯುತ್ತವೆ.

72 ಗಂಟೆಗಳ ಉಚಿತ ಅವಕಾಶವೂ ಮುಂದುವರಿಕೆ;

ಮೆಟಾ ನೀಡಿರುವ ಮತ್ತೊಂದು ಪ್ರಮುಖ ವಿನಾಯಿತಿ ಮುಂದುವರಿಯಲಿದೆ. ಫೇಸ್‌ಬುಕ್ ಪುಟದ ಕಾಲ್-ಟು-ಆ್ಯಕ್ಷನ್ ಬಟನ್ ಅಥವಾ ವಾಟ್ಸ್ಆ್ಯಪ್‌ಗೆ ನೇರವಾಗಿ ಕರೆದೊಯ್ಯುವ ಜಾಹೀರಾತಿನ ಮೂಲಕ ಗ್ರಾಹಕರು ವ್ಯವಹಾರವನ್ನು ಸಂಪರ್ಕಿಸಿದರೆ, ಆ ಸಂವಹನಕ್ಕೆ ಸಂಬಂಧಿಸಿದಂತೆ 72 ಗಂಟೆಗಳ ಉಚಿತ ಅವಧಿ ಮುಂದುವರಿಯಲಿದೆ. ಈ ಅವಧಿಯಲ್ಲಿ ಸಂದೇಶ ವಿತರಣೆಗಾಗಿ ಮೆಟಾ ಶುಲ್ಕ ವಿಧಿಸುವುದಿಲ್ಲ.

ದೊಡ್ಡ ಕಂಪನಿಗಳ ಮೇಲೆ ಪರಿಣಾಮ ಹೆಚ್ಚು;

ಒಂದು ಸಂದೇಶಕ್ಕೆ 14 ಪೈಸೆ ಎಂಬ ಮೊತ್ತ ಸಣ್ಣದಾಗಿ ಕಾಣಬಹುದು. ಆದರೆ ದಿನಕ್ಕೆ ಸಾವಿರಾರು ಅಥವಾ ಲಕ್ಷಾಂತರ ಗ್ರಾಹಕರಿಗೆ ಸಂದೇಶ ಕಳುಹಿಸುವ ಕಂಪನಿಗಳಿಗೆ ಒಟ್ಟಾರೆ ವೆಚ್ಚ ಗಮನಾರ್ಹವಾಗಬಹುದು. ಹೀಗಾಗಿ ಗ್ರಾಹಕರಿಗೆ ಅಗತ್ಯವಿರುವ ಮಾಹಿತಿಯನ್ನು ಒಂದೇ ಸಂದೇಶದಲ್ಲಿ ನೀಡುವುದು, ಅನಗತ್ಯವಾಗಿ ಹಲವು ಚಿಕ್ಕ ಸಂದೇಶಗಳನ್ನು ಕಳುಹಿಸುವುದನ್ನು ಕಡಿಮೆ ಮಾಡುವುದು ಮತ್ತು ಮಾಸಿಕ ಸಂದೇಶ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಕಂಪನಿಗಳಿಗೆ ಮುಖ್ಯವಾಗಬಹುದು.