Kodagu

ಗೋಣಿಕೊಪ್ಪಲು ದಸರಾದಲ್ಲಿ ಕವಿಗೋಷ್ಠಿ

admincoorgdaily

ಗೋಣಿಕೊಪ್ಪಲು ದಸರಾದಲ್ಲಿ ಕವಿಗೋಷ್ಠಿ
ಪೊನ್ನಂಪೇಟೆ, ಅ. 16: 48ನೇ ವರ್ಷದ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಜನೋತ್ಸವ-2026ರ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಿತು.

 ಕವಿಗೋಷ್ಠಿಯನ್ನು ಉದ್ಘಾಟಿಸಿದ ಸಾಹಿತಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷೆ ವಿಜಯ ವಿಷ್ಣು ಭಟ್ ಮಾತನಾಡಿ, ಕೊಡಗು ತಮ್ಮ ಕರ್ಮಭೂಮಿಯೂ ಹೌದು, ತವರೂರೂ ಹೌದು. ಜಿಲ್ಲೆಯೊಂದಿಗೆ 43 ವರ್ಷಗಳ ನಂಟು ಹೊಂದಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೊಡಗಿಗೆ ಬಂದಾಗ ತವರಿಗೆ ಮರಳಿದ ಅನುಭವವಾಗುತ್ತದೆ ಎಂದು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕೃಪಾ ದೇವರಾಜ್ ಮಾತನಾಡಿ, ಹಿಂದಿನ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದರೂ, ಇಂದು ಸಭಾಂಗಣದಲ್ಲಿ ಕವಿತೆಗಳ ಮಳೆ ಸುರಿಯುತ್ತಿದೆ. 118 ಕವಿಗಳು ಒಂದೇ ವೇದಿಕೆಯಲ್ಲಿ ಸಮಾಗಮಗೊಂಡು ತಮ್ಮ ಸಾಹಿತ್ಯಿಕ ಪ್ರತಿಭೆ ಹಾಗೂ ಜ್ಞಾನವನ್ನು ಕವನಗಳ ಮೂಲಕ ಅಭಿವ್ಯಕ್ತಪಡಿಸುತ್ತಿರುವುದು ಸಂತಸದ ಸಂಗತಿ. ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಅವಕಾಶ ದೊರೆತಾಗ ಯುವಕರು ಹೆಚ್ಚೆಚ್ಚು ಇಂತಹ ಕವಿಗೋಷ್ಠಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎರವ ಭಾಷೆಯ ಕವನ ಸಂಕಲನ ಬಿಡುಗಡೆ

ಸಾಹಿತಿ ರಜನಿ ಎಸ್.ಎಂ. ಅವರ ಎರವ ಭಾಷೆಯ ‘ಪಾವೆ’ (ನೆರಳು) ಕವನ ಸಂಕಲನವನ್ನು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಬಿಡುಗಡೆ ಮಾಡಿದರು.

ವಿವಿಧ ಭಾಷೆಗಳ ಕವಿಗಳ ಸಮಾಗಮ

ಕವಿಗೋಷ್ಠಿಯಲ್ಲಿ ಒಟ್ಟು 118 ಕವಿಗಳು ವಿವಿಧ ಭಾಷೆಗಳಲ್ಲಿ ಕವನ ವಾಚಿಸಿದರು. ಕನ್ನಡದ 41 ಕವಿಗಳೊಂದಿಗೆ ಹಿಂದಿ, ಕೊಡವ, ಅರೆಭಾಷೆ, ಇಂಗ್ಲಿಷ್, ಬ್ಯಾರಿ, ತುಳು, ಮಲಯಾಳಂ, ಎರವ, ಜೇನುಕುರುಬ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಭಾಗವಹಿಸಿದ್ದರು. ವಿವಿಧ ಭಾಷೆ ಮತ್ತು ಸಂಸ್ಕೃತಿಗಳ ಸಾಹಿತ್ಯ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿದ್ದು ಕವಿಗೋಷ್ಠಿಯ ವಿಶೇಷವಾಗಿತ್ತು.

ಜೆನ್-ಜಿ ಕವಿಗಳಿಂದ ಕವನ ವಾಚನ

ಯುವ ಕವಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಿದ್ದ ಜೆನ್-ಜಿ ಕವಿಗೋಷ್ಠಿಯಲ್ಲಿ 23 ಯುವ ಕವಿಗಳು ವಿವಿಧ ಭಾಷೆಗಳಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಕನ್ನಡದ 19 ಸೇರಿದಂತೆ ತೆಲುಗು, ಕೊಡವ, ಇಂಗ್ಲಿಷ್ ಹಾಗೂ ಕುಡುಬಿ ಕೊಂಕಣಿ ಭಾಷೆಗಳ 4 ಕವಿಗಳು ಪಾಲ್ಗೊಂಡಿದ್ದರು.

ಮಕ್ಕಳ ಕವಿಗೋಷ್ಠಿಯಲ್ಲೂ ಪುಟಾಣಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಕನ್ನಡದ , ಹಿಂದಿ, ಇಂಗ್ಲಿಷ್ ಹಾಗೂ ಅರೆಭಾಷೆ ಸೇರಿದಂತೆ 10 ಬಾಲ ಕವಿಗಳು ವಿವಿಧ ಭಾಷೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದರು. ವಿವಿಧ ವಯೋಮಾನದ ಕವಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಈ ಬಾರಿಯ ಕವಿಗೋಷ್ಠಿಯ ಮತ್ತೊಂದು ವಿಶೇಷವಾಗಿತ್ತು.

ಕವಯಿತ್ರಿ ರಜನಿ ಎಸ್.ಎಂ. ಕವಿಗೋಷ್ಠಿಯ ಸಂಚಾಲಕಿಯಾಗಿ, ಎಂ.ಕೆ. ಚಂದನ್ ಕಾಮತ್ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ಅತಿಥಿಗಳಾಗಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಶ್ರೀಮಂಗಲ ಹೋಬಳಿ ಕಸಾಪ ಅಧ್ಯಕ್ಷ ಉಳುವಂಗಡ ಕಾವೇರಿ ಉದಯ ಹಾಗೂ ಪೊನ್ನಂಪೇಟೆ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮನೆಯಪಂಡ ಶೀಲಾ ಬೋಪಣ್ಣ, ಟಿ ಆರ್ ವಿನೋದ್, ರಾಮಕೃಷ್ಣ, ಚಂದನಾ ಮಂಜುನಾಥ್, ವಾಮನ , ಸುನಿತಾ ಹಾಗೂ ನೂರಾರು ಜನರು ಭಾಗವಹಿಸಿದ್ದರು.