ಕುಶಾಲನಗರ ಬಸ್ ನಿಲ್ದಾಣದಲ್ಲಿ ಕಾಲಹರಣ ಮಾಡುವ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಬಿಸಿ, ಪಾಠ
admincoorgdaily

ಕುಶಾಲನಗರ, ಅ.7 : ಕುಶಾಲನಗರದ ವಿವಿಧ ಕಾಲೇಜುಗಳಿಗೆ ಸರಕಾರಿ ಬಸ್ ನಲ್ಲಿ ಬರುವ ವಿದ್ಯಾರ್ಥಿಗಳು ಒಂದೇ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದು ಹಾಗೂ ಅದೇ ಸ್ಥಳಕ್ಕೆ ತೆರಳುವ ಉಳಿದ ಬಸ್‌ಗಳು ಖಾಲಿ ಇದ್ದರೂ ತಮ್ಮ ಸ್ನೇಹಿತರಿಗಾಗಿ ಕಾಯುತ್ತಾ ಹಾಗೂ ಕಾಲಹರಣ ಮಾಡುತ್ತಾ ಕಡೆಗೆ ಬಸ್ಸಿನ ಫುಟ್ ಬೋರ್ಡ್ನಲ್ಲಿ ನಿಂತುಕೊಂಡು, ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ದೃಶ್ಯ ಕಂಡುಬಂದಿತ್ತು.
ಈ ಬಗ್ಗೆ ಬಂದ ಸಾರ್ವಜನಿಕ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಗೀತಾ ಹಾಗೂ ಸಿಬ್ಬಂದಿ ಇಂದು ಕುಶಾಲನಗರ ಬಸ್ ನಿಲ್ದಾಣದಲ್ಲಿ ಕಾಲಹರಣ ಮಾಡುವ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿ ಕಾನೂನಿನ ಅರಿವು ಮೂಡಿಸಿದರು.
ವಿದ್ಯಾರ್ಥಿಗಳು ಗುಂಪುಗೂಡಿ ಒಂದೇ ಬಸ್‌ಗೆ ಮುಗಿಬೀಳದಂತೆ ಲಭ್ಯವಿರುವ ಬಸ್‌ಗಳನ್ನು ಬಳಸಿಕೊಳ್ಳುವಂತೆ ತಿಳಿಹೇಳಲಾಯಿತು. ಬಸ್‌ನಲ್ಲಿ ಫುಟ್ ಬೋರ್ಡ್ ಮೇಲೆ ನಿಂತುಕೊಂಡು ಅಥವಾ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸದಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.