Kodagu

ಪೊಲೀಸ್ ಹುತಾತ್ಮರ ದಿನಾಚರಣೆ

admincoorgdaily

ಪೊಲೀಸ್ ಹುತಾತ್ಮರ ದಿನಾಚರಣೆ
1002667769.jpg


ಮಡಿಕೇರಿ:- ಜಿಲ್ಲಾ ಪೊಲೀಸ್ ಘಟಕ ವತಿಯಿಂದ ‘ಪೊಲೀಸ್ ಸಂಸ್ಮರಣಾ ದಿನಾಚರಣೆ’ಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆಯಿತು. 

     ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದಂತೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿ, ಗೌರವ ನಮನ ಸಲ್ಲಿಸಿದರು.

         ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಪೊಲೀಸರ ಮೂಲಭೂತ ಕರ್ತವ್ಯಗಳಲ್ಲಿ ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಬದ್ಧವಾಗಿ  ಇರುವ ಹಕ್ಕನ್ನು ರಕ್ಷಣೆ ಮಾಡುವುದು, ಅಪರಾಧ ಪ್ರಕರಣ ತಡೆಯುವುದು, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಆಗದಂತೆ ನೋಡಿಕೊಳ್ಳುವುದು ಅತಿಮುಖ್ಯವಾಗಿದೆ ಎಂದರು.

       ಹಾಗೆಯೇ ಪ್ರಾಕೃತಿಕ ವಿಕೋಪ ಹಾಗೂ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಪಾತ್ರ ಪ್ರಮುಖವಾಗಿದ್ದು, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ಇದೇ ಎಂದು ಜಿಲ್ಲಾಧಿಕಾರಿ ಅವರು ಒತ್ತಿ ಹೇಳಿದರು.

      ಪೊಲೀಸ್ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತಮ್ಮ ಅಮೂಲ್ಯ ಜೀವ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಸ್ಮರಣೆಗಾಗಿ   ಈ ದಿನವನ್ನು ಪೊಲೀಸ್ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

         ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಾತನಾಡಿ ರಾಷ್ಟ್ರದಲ್ಲಿ ಪೊಲೀಸ್ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ (2025-26 ನೇ ಅವಧಿಯಲ್ಲಿ) 154 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು‌ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ, ಇವರಲ್ಲಿ ರಾಜ್ಯದ ಐವರು ಸೇರಿದ್ದಾರೆ ಎಂದು ಹುತಾತ್ಮ ಪೊಲೀಸರ ಹೆಸರು ಓದಿದರು.
       
   ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಪೆರೆಡ್ ಕಮಾಂಡರ್ ಗಣೇಶ್ ಅವರು ಗೌರವ ವಂದನೆ ಸಲ್ಲಿಸಿ, ಮುಖ್ಯ ಅತಿಥಿಗಳಿಂದ ಅನುಮತಿ ಪಡೆದರು. 
    ಹಾಸನ‌ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ , ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಚಂದ್ರಶೇಖರ, ಗೃಹ ರಕ್ಷಕ ದಳ ಪರವಾಗಿ ಸೂರಜ್, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ಪ್ರಮುಖರಾದ ಅಂಬೆಕಲ್ಲು ನವೀನ್, ಸಂತೋಷ, ದಿನೇಶ್, ಮಂಡುವಂಡ ಮುತ್ತಪ್ಪ, ಸೂರ್ತಲೆ ಸೋಮಣ್ಣ, ಉಷಾ, ಚೆನ್ನಕೇಶವ, ಖತಿಜಾ, ಮಧುಚಂದ್ರ, ಶಶಿಕುಮಾರ, ಕಂದಮಣಿ ಮತ್ತಿತರರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ಗೌರವಿಸಿದರು.

ನಂತರ ಪೊಲೀಸ್ ಕವಾಯತು ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆ ನುಡಿಸಿದರು. ಬಳಿಕ ಎರಡು ನಿಮಿಷ ಮೌನಾಚರಿಸಲಾಯಿತು. 

ರಾಷ್ಟ್ರದ ಆಂತರೀಕ ಭದ್ರತೆಯಲ್ಲಿ ಪೊಲೀಸರ ಸೇವೆ ಅನುಪಮವಾದುದು, ಶಾಂತಿ-ಸುರಕ್ಷತೆ ಕಾಪಾಡುವುದು ಹಾಗೂ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚಿನದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಅವರು ತಿಳಿಸಿದರು. 

     ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್, ಐ.ಪಿ.ಮೇದಪ್ಪ, ಅನೂಪ್ ಮಾದಪ್ಪ,
ಜಿಲ್ಲೆಯ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳು ಇದ್ದರು, ಪೊಲೀಸ್ ಮುಖ್ಯಪೇದೆ ಫಾರುಕ್, ಲೋಕೇಶ್ ಮತ್ತು ಸುಕನ್ಯಾ ಅವರು ನಿರೂಪಿಸಿ, ವಂದಿಸಿದರು.