ಪೊನ್ನಂಪೇಟೆಯಲ್ಲಿ ಪೊನ್ನೋಣಂ ಸಂಭ್ರಮ;ದಶಕದ ಸಂಭ್ರಮಕ್ಕೆ ಚಾಲನೆ - 10 ಕಾರ್ಯಕ್ರಮಗಳ ಘೋಷಣೆ
admincoorgdaily

ಪೊನ್ನಂಪೇಟೆ, ನ. 7: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಪೊನ್ನೋಣಂ–2026 ಕಾರ್ಯಕ್ರಮವನ್ನು ಭಾನುವಾರದಂದು ಪರಿಮಳ ಮಂಗಲ ವಿಹಾರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೊದಲಿಗೆ ನಾಟ್ಯ ಕಲಾವಿದೆ ಲಿಧಿನಾ ಸುಹಾಸ್ ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಹಾಗೂ ಸಮಾಜಸೇವಕ ಚಿರಿಯಪಂಡ ಸುರೇಶ್ ನಂಜಪ್ಪ, ಸಮಾಜದ ಒಗ್ಗಟ್ಟನ್ನು ಒಡೆಯಲು ಕೆಲವೊಂದು ದುಷ್ಟಶಕ್ತಿಗಳು ಪ್ರಯತ್ನಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಸಮಾರಂಭಗಳಲ್ಲಿ ರಾಜಕೀಯ ಬೆರೆಸದೆ ಸಮಾಜದ ಅಭಿವೃದ್ಧಿ ಮತ್ತು ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಜಾತಿ, ಧರ್ಮ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳಲ್ಲಿ ವೈವಿಧ್ಯತೆ ಇದ್ದರೂ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬದುಕುವುದೇ ದೇಶದ ವೈಶಿಷ್ಟ್ಯವಾಗಿದೆ ಎಂದರು.
ಯುವ ಪೀಳಿಗೆಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕೃತಿ, ಪರಂಪರೆ, ದೇಶಪ್ರೇಮ ಹಾಗೂ ಸ್ವಾಭಿಮಾನದ ಮೌಲ್ಯಗಳನ್ನು ಕಲಿಸಬೇಕು. ಕೇವಲ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದೇ ಶಿಕ್ಷಣದ ಉದ್ದೇಶವಲ್ಲ. ಮಕ್ಕಳ ನಡವಳಿಕೆ, ಶಿಸ್ತು, ಅಭ್ಯಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಪೋಷಕರು ಆದ್ಯತೆ ನೀಡಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ದುಶ್ಚಟಗಳಿಂದ ದೂರವಿರುವಂತೆ ಮಾರ್ಗದರ್ಶನ ನೀಡಬೇಕು ಎಂದು ಕರೆ ನೀಡಿದರು.
ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಮಕ್ಕಳಿಗೆ ನೈತಿಕ ಮೌಲ್ಯಗಳ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಮಾಡಬೇಕು. ಸಮುದಾಯದ ಜನರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜಕ್ಕೆ ಉತ್ತಮ ಹೆಸರು ಗಳಿಸಲು ಸಾಧ್ಯ. ಕೊಡಗಿನ ಜನತೆಗೆ ಯಾವುದೇ ಸಮಸ್ಯೆಗಳು ಎದುರಾದರೂ ಹಿಂದೂ ಮಲಯಾಳಿ ಸಂಘ ಸದಾ ಸಹಾಯಹಸ್ತ ಚಾಚಲಿದೆ ಎಂದು ಭರವಸೆ ನೀಡಿದರು.
ಸಮಾಜದ ಸ್ಥಾಪಕ ಅಧ್ಯಕ್ಷ ಶರತ್ ಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ 1,410 ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಿಸಿಕೊಡಲು ನೆರವಾದ ಸಮಾಜಸೇವಕ ಚೋಕಂಡ ಸಂಜು ಸುಬ್ಬಯ್ಯ, ಸಾಹಿತಿ ಹಾಗೂ ಸಮಾಜಸೇವಕಿ ಪುಷ್ಪಲತಾ ಶಿವಪ್ಪ, ಮಲೆಯಾಳಂ ಚಿತ್ರನಟಿ ಪ್ರಿಯಾಂಕಾ ನಾರಾಯಣ್, ರಕ್ತದಾನಿ ಪ್ರಿಯಾ ಮೋಹನ್, ಸಮಾಜಸೇವಕ ಹಾಗೂ ಪತ್ರಕರ್ತ ವಿ.ವಿ. ಅರುಣ್ ಕುಮಾರ್, ನಿವೃತ್ತ ಸೈನಿಕ ಕೆ.ಕೆ. ಮೋಹನ್ದಾಸ್, ಸಮಾಜಸೇವಕ ಹಾಗೂ ಪತ್ರಕರ್ತ ಪುತ್ತಮ್ ಪ್ರದೀಪ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಕೆ. ಸುಷಾ, ಲಿಧಿನಾ ಸುಹಾಸ್, ಟಿ.ಆರ್. ವಿನೋದ್, ರಾಮಕೃಷ್ಣ, ಟಿ.ವಿ. ಭಾಗ್ಯವತಿ ಹಾಗೂ ಪಿ.ಜಿ. ಬಿಂದು ಅವರನ್ನು ಗೌರವಿಸಲಾಯಿತು.
ನಂತರ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಕ್ರೀಡಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ, ಸಮಾಜದ ಕಳೆದ ಮೂರು ವರ್ಷಗಳ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಅನಾವರಣಗೊಳಿಸಲಾಯಿತು. ಸಮಾಜದ ದಶಕದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಿರುವ ಹತ್ತು ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದರೊಂದಿಗೆ ದಶಕದ ಸಂಭ್ರಮದ ವಿಶೇಷ ಲಾಂಛನವನ್ನೂ ಅನಾವರಣಗೊಳಿಸಲಾಯಿತು.
ತಿರುವಾಧಿರ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.ರಜನಿ ಮದುರಾಜನ್ ಪ್ರಾರ್ಥಿಸಿದರು. ಸಮಾಜದ ಕಾರ್ಯದರ್ಶಿ ಸುಬ್ರಮಣಿ ಎಂ.ಎಸ್. ಸ್ವಾಗತಿಸಿದರು. ಶಾಜಿ ಅಚ್ಯುತ್ತನ್ ವಂದಿಸಿದರು. ಜ್ಯೋತಿ ಅರುಣ್ ಕುಮಾರ್ ನಿರೂಪಿಸಿದರು. ಸಂದರ್ಭ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.