State News

ಕಳಪೆ ಶೂ ವಿತರಣೆ: ಕೊಡಗು ಡಿಡಿಪಿಐ, ಬಿಇಒ ವಿರುದ್ಧ ಲೋಕಾಯುಕ್ತ ಸ್ವಯಂ ದೂರು

admincoorgdaily

ಕಳಪೆ ಶೂ ವಿತರಣೆ: ಕೊಡಗು ಡಿಡಿಪಿಐ, ಬಿಇಒ ವಿರುದ್ಧ ಲೋಕಾಯುಕ್ತ ಸ್ವಯಂ ದೂರು
ಮಡಿಕೇರಿ, ಸೆ.10: ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಿಸಿದ ಆರೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಸೇರಿ 15 ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕರು (DDPI) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ವಿರುದ್ಧ  ಕರ್ನಾಟಕ ಉಪಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ದಿನಪತ್ರಿಕೆಗಳಲ್ಲಿ ವರದಿಯಾದಂತೆ ಈ ವರ್ಷದ ಶೂಗಳು ಒಂದು ವಾರದಲ್ಲೇ ಹರಿದುಹೋಗುತ್ತಿವೆ, ಹೊಲಿಗೆ ಬಿಚ್ಚಿಕೊಳ್ಳುತ್ತಿವೆ. ಕಳೆದ ವರ್ಷಕ್ಕಿಂತ ಕಳಪೆಯಾಗಿದ್ದು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಗಮನಿಸಿ ನ್ಯಾ.ಕೆ.ಎನ್.ಫಣೀಂದ್ರ ಅವರು ಈ ಆದೇಶ ಹೊರಡಿಸಿದ್ದಾರೆ. ಇದು ಸಂವಿಧಾನದ 21A ವಿಧಿ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲೆಯ ಪ್ರಕರಣ ಸಂಖ್ಯೆ: Compt/Uplok/MYS/5731/2026, ಈ ಕುರಿತು ಲೋಕಾಯುಕ್ತ ಎಸ್‌ಪಿಗೆ 2 ವಾರದಲ್ಲಿ ಪ್ರಾಥಮಿಕ ತನಿಖಾ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆದೇಶದ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ.