Kodagu

ಒಂದು ವರ್ಷ ಕಳೆದರೂ ಮುಗಿಯದ ರಸ್ತೆ ಕಾಮಗಾರಿ; ನ.14ರಂದು ಜಿಲ್ಲಾ ಪಂಚಾಯಿತಿ ವೃತ್ತದಲ್ಲಿ ಗ್ರಾಮಸ್ಥರ ಪ್ರತಿಭಟನೆ!

admincoorgdaily

ಒಂದು ವರ್ಷ ಕಳೆದರೂ ಮುಗಿಯದ ರಸ್ತೆ ಕಾಮಗಾರಿ; ನ.14ರಂದು ಜಿಲ್ಲಾ ಪಂಚಾಯಿತಿ ವೃತ್ತದಲ್ಲಿ ಗ್ರಾಮಸ್ಥರ ಪ್ರತಿಭಟನೆ!
ಮಡಿಕೇರಿ: ಗಾಳಿಬೀಡು ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಒಂದು ವರ್ಷ ಕಳೆದರೂ ಪೂರ್ಣಗೊಳ್ಳದಿರುವುದನ್ನು ಖಂಡಿಸಿ ಗ್ರಾಮಸ್ಥರೊಂದಿಗೆ ನ.೧೪ರಂದು ಜಿಲ್ಲಾ ಪಂಚಾಯಿತಿ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗಾಳಿಬೀಡು ಗ್ರಾಮದ ಗ್ರಾಮಸ್ಥರಾದ ದಿಶಾಂತ್ ತಿಳಿಸಿದ್ದಾರೆ.

ಗಾಳಿಬೀಡು ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ದಿನಾಂಕ ೧೪-೧೧-೨೦೨೫ ರಂದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ೧೪-೧೧-೨೦೨೬ಕ್ಕೆ ಗುದ್ದಲಿ ಪೂಜೆ ನೆರವೇರಿ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಆದರೆ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಾರ್ವಜನಿಕರಿಗೆ ನಿರೀಕ್ಷಿತ ರಸ್ತೆ ಸೌಲಭ್ಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರು ಈ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂಬ ಮಾಹಿತಿ ನಮಗಿದೆ. ಹಾಗಾದರೆ ಈಗ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು? ಟೆಂಡರ್ ಪಡೆದ ಗುತ್ತಿಗೆದಾರರು ತಮ್ಮ ಜವಾಬ್ದಾರಿಯನ್ನು ಯಾವಾಗ ನಿರ್ವಹಿಸುತ್ತಾರೆ? ಕಾಮಗಾರಿ ಆರಂಭಿಸಲು ಏನು ಅಡ್ಡಿಯಿದೆ? ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಕೈಗೊಂಡಿರುವ ಕ್ರಮಗಳೇನು? ಇವುಗಳಿಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಉತ್ತರ ಬೇಕಾಗಿದೆ ಎಂದು ಆಗ್ರಹಿಸಿದರು.

ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಜನರು ಸಂಚರಿಸುತ್ತಾರೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಉದ್ಯೋಗಿಗಳು, ವಾಹನ ಸವಾರರು ಸೇರಿದಂತೆ ಪ್ರತಿಯೊಬ್ಬರೂ ರಸ್ತೆಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದಾಗ ರಸ್ತೆಯ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಪ್ರತಿದಿನ ಆತಂಕದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾಮಗಾರಿ ವಿಳಂಬಕ್ಕೆ ನಿಖರವಾದ ಕಾರಣವನ್ನು ಬಹಿರಂಗಪಡಿಸಬೇಕು. ಟೆಂಡರ್ ಪಡೆದ ಗುತ್ತಿಗೆದಾರರು ತಕ್ಷಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಪೂರ್ಣಗೊಳ್ಳುವ ನಿಖರವಾದ ದಿನಾಂಕವನ್ನು ಘೋಷಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಅಧಿಕಾರಿಗಳು ಖಚಿತಪಡಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಗುಡ್ಡೆಮನೆ ಉಮೇಶ್, ಪೂಜಾರಿರ ಸಂತೋಷ್, ಯಾಲದಾಳು ನಿತೀನ್, ಪುಷ್ಪರಾಜ್, ಶರತ್ ಇದ್ದರು.