Kodagu

ಅಂಗಾಂಗ ದಾನ ಮಾಡಿದ ಯೋಗೇಶ್ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ

admincoorgdaily

ಅಂಗಾಂಗ ದಾನ ಮಾಡಿದ ಯೋಗೇಶ್ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ
1002805005.jpg


ಮಡಿಕೇರಿ : ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ ಮಡಿಕೇರಿಯ ಚಾಮುಂಡೇಶ್ವರಿ ನಗರದ ಯೋಗೇಶ್ ಅವರ ಮನೆಗೆ ಗುರುವಾರ ಸಮಾಜ ಸೇವಕರಾದ ಪ್ರಸನ್ನ ಎಡಿಕೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

       ಘಟನೆಯ ಬಗ್ಗೆ ಕುಟುಂಬಸ್ಥರಿಂದ ಮಾಹಿತಿ ಪಡೆದು, ಯೋಗೇಶ್ ಅವರ ಅಂಗಾಂಗಗಳ ದಾನದ ಮೂಲಕ ಕುಟುಂಬಸ್ಥರು ಮಾನವೀಯ ಕಾರ್ಯ ಮಾಡಿರುವುದಕ್ಕೆ ಇದೇ ಸಂದರ್ಭ ಶ್ಲಾಘನೆ ವ್ಯಕ್ತಪಡಿಸಿದರು.

    ಇತರರಿಗೆ ಯೋಗೇಶ್ ಅವರ ಅಂಗಾಂಗ ನೀಡುವ ಮೂಲಕ ಬೆಳಕಾಗಿದ್ದಾರೆ. ಇಂತಹ ಮಹತ್ತರ ಕಾರ್ಯ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ. ಯೋಗೇಶ್ ನಮ್ಮಿಂದ ದೂರವಾಗಿರಬಹುದು ಆದರೆ ಅಂಗಾಂಗ ದಾನದ ಮೂಲಕ ಅವರ ಹೆಸರು ಶಾಶ್ವತವಾಗಿ ಸಮಾಜದಲ್ಲಿ ಉಳಿಯಲಿದೆ ಎಂದು ಹೇಳಿದರು.

     ಯೋಗೇಶ್ ಗೆ ಮೆದುಳು ನಿಷ್ಕ್ರಿಯಗೊಂಡಿದ್ದು, ಘಟನೆ ನಡೆದ ಒಂದು ಗಂಟೆ ಒಳಗಾಗಿ ಆಸ್ಪತ್ರೆಗೆ ಸಾಗಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರೆ ಯೋಗೇಶ್ ಅವರನ್ನು ಉಳಿಸಬಹುದಿತ್ತು ಎಂದು ಕುಟುಂಬಸ್ಥರು ಇದೇ ಸಂದರ್ಭ ಹೇಳಿದರು. 

      ರಾತ್ರಿ ವೇಳೆಯಲ್ಲಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದಿರುವ ಬಗ್ಗೆ ಮಾಹಿತಿ ಪಡೆದ ಪ್ರಸನ್ನ ಎಡಿಕೇರಿ ಅವರು, ಮಡಿಕೇರಿಯ ಜಿಲ್ಲಾಸ್ಪತ್ರೆಗೆ  ಭೇಟಿ‌ ನೀಡಿ ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ ಅವರನ್ನು ಭೇಟಿಯಾಗಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

        ರಾತ್ರಿ ವೇಳೆಯಲ್ಲಿ ಕೂಡ ತಜ್ಞ ವೈದ್ಯರು ಆಸ್ಪತ್ರೆಯಲ್ಲಿ ಇರಬೇಕು. ಇದರಿಂದ ತುರ್ತು ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಅಲ್ಲದೆ ರೋಗಿಗಳು ಚೀಟಿ ಮಾಡಿಸಲು ಅಲೆದಾಡುವುದನ್ನು ತಪ್ಪಿಸಬೇಕಾಗಿದೆ. ಕೆಲವು ವೈದ್ಯರು ರೋಗಿಗಳಿಗೆ ಸರಿಯಾಗಿ ಸ್ಪಂದಿಸದೇ  ಕಡೆಗಣಿಸುತ್ತಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ  ಪ್ರಸನ್ನ ಮನವಿ ಮಾಡಿದರು.

     ಇದಕ್ಕೆ ಪ್ರತಿಕ್ರಿಯೆ ಜಿಲ್ಲಾ ಸರ್ಜನ್ ನಂಜುಂಡಯ್ಯ ಅವರು, ಈಗಾಗಲೇ ತಜ್ಞ ವೈದ್ಯರು ರಾತ್ರಿ ವೇಳೆಯಲ್ಲಿ ಕೂಡಾ ಆಸ್ಪತ್ರೆಯಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ವೈದ್ಯರ ಇರುವಿಕೆ ಬಗ್ಗೆ ಮಾಹಿತಿ ಹಾಗೂ ದೂರವಾಣಿ ಸಂಪರ್ಕವನ್ನು ಕೂಡಾ ನೋಟೀಸ್ ಬೋರ್ಡ್ ನಲ್ಲಿ ಹಾಕಲಾಗುವುದು ಎಂದು ತಿಳಿಸಿದರು.

      ವೈದ್ಯರು ರೋಗಿಗಳೊಂದಿಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.